ಈಶಾನ್ಯ ರಾಜ್ಯಗಳಾದ ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆಗೆ ಇಂದು ಮತದಾನ ನಡೆಯುತ್ತಿದ್ದು, ಕೇಂದ್ರ ಚುನಾವಣಾ ಆಯೋಗ ಇದಕ್ಕೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ.
ಈ ಎರಡೂ ರಾಜ್ಯಗಳಲ್ಲಿ ತಲಾ 59 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 118 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಬೇಕಿತ್ತಾದರೂ ಶಿಲ್ಲಾಂಗ್ ಕ್ಷೇತ್ರದ ಅಭ್ಯರ್ಥಿ ಮೃತಪಟ್ಟಿರುವ ಕಾರಣ ಆ ಒಂದು ಕ್ಷೇತ್ರದ ಮತದಾನ ಮುಂದೂಡಲಾಗಿದೆ. ಇನ್ನುಳಿದಂತೆ ಇತರ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.
ಶಿಲ್ಲಾಂಗ್ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಮೇಘಾಲಯದ ಮಾಜಿ ಗೃಹ ಸಚಿವ ಹಾಗೂ ಯುನೈಟೆಡ್ ಡೆಮಾಕ್ರೆಟಿಕ್ ಪಾರ್ಟಿಯ ಹೆಚ್.ಡಿ.ಆರ್. ಲಿಂಗ್ಡೋ ಫೆಬ್ರವರಿ 20ರಂದು ಹೃದಯಾಘಾತದ ಕಾರಣಕ್ಕೆ ಮೃತಪಟ್ಟಿದ್ದರು.
ಮಾರ್ಚ್ 2ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಬಹುತೇಕ ಅಂದು ಸಂಜೆ ಒಳಗಾಗಿ ಫಲಿತಾಂಶ ಹೊರ ಬೀಳುವ ನಿರೀಕ್ಷೆ ಇದೆ.