ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆಗಳಿಗೆ ನಾಳೆ ಮತದಾನ ನಡೆಯಲಿದ್ದು, ಸುಸೂತ್ರವಾಗಿ ನಡೆಸಲು ಚುನಾವಣಾ ಆಯೋಗ ಈಗಾಗಲೇ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.
ಅಭ್ಯರ್ಥಿ ಮೃತಪಟ್ಟಿರುವ ಕಾರಣ ಮೇಘಾಲಯದ ಶಿಲ್ಲಾಂಗ್ ವಿಧಾನಸಭಾ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದ್ದು, ಇದನ್ನು ಹೊರತುಪಡಿಸಿದರೆ ಉಳಿದೆಲ್ಲ ಕ್ಷೇತ್ರಗಳಿಗೆ ನಿಗದಿಯಂತೆ ಮತದಾನ ನಡೆಯಲಿದೆ.
ಶಿಲ್ಲಾಂಗ್ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಮೇಘಾಲಯದ ಮಾಜಿ ಗೃಹ ಸಚಿವ ಹಾಗೂ ಯುನೈಟೆಡ್ ಡೆಮಾಕ್ರೆಟಿಕ್ ಪಾರ್ಟಿಯ ಹೆಚ್.ಡಿ.ಆರ್. ಲಿಂಗ್ಡೋ ಫೆಬ್ರವರಿ 20ರಂದು ಹೃದಯಾಘಾತದ ಕಾರಣಕ್ಕೆ ಮೃತಪಟ್ಟಿದ್ದರು.
ಮತದಾನ ನಡೆಯುವ ಮೇಘಾಲಯ ಹಾಗೂ ನಾಗಾಲ್ಯಾಂಡ್ ನಲ್ಲಿ ಬಹಿರಂಗ ಪ್ರಚಾರ ಕಾರ್ಯ ಶನಿವಾರದಂದು ಅಂತ್ಯಗೊಂಡಿದ್ದು, ಸೋಮವಾರ ಮತದಾನ ನಡೆಯಲಿದೆ. ಮಾರ್ಚ್ 2ರಂದು ಮತ ಎಣಿಕೆ ನಡೆಯಲಿದ್ದು, ಬಹುತೇಕ ಅಂದೇ ಫಲಿತಾಂಶ ಹೊರ ಬೀಳಲಿದೆ.