ರಾಮನಗರ: ಮೇಕೆದಾಟು ಪಾದಯಾತ್ರೆ ನಡೆಸಲು ಬಿಡಬಾರದು ಎಂದು ರಾಜ್ಯದ ಬಿಜೆಪಿ ಸರ್ಕಾರ ಶತಪ್ರಯತ್ನ ಮಾಡುತ್ತಿದೆ. ವೀಕೆಂಡ್ ಕರ್ಫ್ಯೂ, ಜನರಿಗೆ ಬೆದರಿಕೆ ಸೇರಿದಂತೆ ಹಲವು ರೀತಿಯಲ್ಲಿ ಒತ್ತಡ ಹಾಕಿದರು. ಆದರೂ ನಾವು ಕುಡಿಯುವ ನೀರಿಗಾಗಿ ಪಾದಯಾತ್ರೆಯನ್ನು ನಡೆಸಲು ಮುಂದಾಗಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಂಗಮ ಕ್ಷೇತ್ರದಲ್ಲಿ ಪಾದಯಾತ್ರೆಗೆ ಚಾಲನೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಕಳೆದ 2 ತಿಂಗಳ ಹಿಂದೆಯೇ ನಾವು ಮೇಕೆದಾಟು ಪಾದಯಾತ್ರೆ ಘೋಷಿಸಿದ್ದೆವು. ನಮ್ಮ ಪಾದಯಾತ್ರೆ ತಡೆಯಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಪಾದಯಾತ್ರೆ ಕಾಂಗ್ರೆಸ್ ಪಾದಯಾತ್ರೆ ಎಂದು ಕರೆಯುತ್ತಿದೆ. ಆದರೆ ಇದು ಯಾವುದೇ ಒಂದು ಪಕ್ಷದ ಪಾದಯಾತ್ರೆಯಲ್ಲ. ಜನರ ಹಿತಕ್ಕಾಗಿ, ಕುಡಿಯುವ ನೀರಿಗಾಗಿ ಮಾಡುತ್ತಿರುವ ಹೋರಾಟ. ನೀರು ಕೇವಲ ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಅಗತ್ಯವಲ್ಲ ಪ್ರತಿಯೊಬ್ಬ ವ್ಯಕ್ತಿಗೂ ಜೀವಜಲ ಮುಖ್ಯ. ಆ ನಿಟ್ಟಿನಲ್ಲಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸಲಾಗುತ್ತಿದೆ. ಯೋಜನೆ ಜಾರಿಯಾದರೆ ಮುಂದಿನ 50 ವರ್ಷಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ ಎಂದರು.
ಮೇಕೆದಾಟು ಯೋಜನೆ ಜಾರಿಗೆ ತಂದಿದ್ದೇ ನಾವು. 2013ರ ಜೂನ್ ನಲ್ಲಿ ಡಿಪಿಆರ್ ಸಿದ್ಧವಾಗಿತ್ತು. ನಮ್ಮ ಅವಧಿಯಲ್ಲಿ ಎಲ್ಲಿಯೂ ವಿಳಂಬವಾಗಿಲ್ಲ. ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನೂ ಮಾಡೇ ಇಲ್ಲ ಎಂದು ಬಿಜೆಪಿಗರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಚಿವ ಗೋವಿಂದ ಕಾರಜೋಳ ದಿನಕ್ಕೊಂದು ಜಾಹೀರಾತು ನೀಡುತ್ತಾ, ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ರಾಜ್ಯ ಬಿಜೆಪಿಯ 25 ಸಂಸದರಿದ್ದಾರೆ ಅವರು ಏನು ಮಾಡುತ್ತಿದ್ದಾರೆ. ನೀರಿನ ಬಗ್ಗೆ, ಜನರ ಬಗ್ಗೆ ಇವರಿಗೆ ಕಾಳಜಿ ಇದ್ದಿದ್ದರೆ ಮೇಕೆದಾಟು ಯೋಜನೆಗಾಗಿ ಕ್ಲಿಯರೆನ್ಸ್ ಕೊಡುವಂತೆ ಮಾಡುತ್ತಿದ್ದರು. ಇಷ್ಟೊಂದು ಸಂಸದರಿದ್ದರೂ ರಾಜ್ಯದ ನೀರಾವರಿ ಯೋಜನೆಗಾಗಿ ಕೇಂದ್ರ ಸರ್ಕಾರ ಬಳಿ ಚಕಾರವೆತ್ತುತ್ತಿಲ್ಲ. ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾದರೂ ಸಂಸದರಿಗೆ, ಸಚಿವರಿಗೆ ಯಾವುದೇ ಕಾಳಜಿಯಿಲ್ಲ ಎಂದು ವಾಗ್ದಾಳಿ ನಡೆಸಿದರು.