ಬೆಂಗಳೂರು: ರಾಸಲೀಲೆಗಾಗಿ ನಾನು ತಾಜ್ ವೆಸ್ಟೆಂಡ್ ಗೆ ಹೋಗಿಲ್ಲ, ಸರ್ಕಾರಿ ಬಂಗಲೆ ಇರಲಿಲ್ಲ ಹಾಗಾಗಿ ರೆಸ್ಟ್ ಮಾಡಲು ಹೋಗಿದ್ದೆ. ಮೆಗಾಸಿಟಿ ಹೆಸರಲ್ಲಿ ರೈತರನ್ನು ಬೀದಿ ಪಾಲು ಮಾಡಿದ ಈತನಿಂದ ನಾನು ಹೇಳಿಸಿಕೊಳ್ಳಬೇಕಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನನ್ನ ಬದುಕು ತೆರೆದ ಪುಸ್ತಕ, ಯಾವುದೂ ಕದ್ದುಮುಚ್ಚಿ ಇಲ್ಲ. ನಾನು ಸಿಎಂ ಆಗಿದ್ದಾಗ ನನಗೆ ಸರ್ಕಾರಿ ಬಂಗಲೆ ಇರಲಿಲ್ಲ, ಹಾಗಾಗಿ ತಾಜ್ ವೆಸ್ಟೆಂಡ್ ನಲ್ಲಿ ವಿಶ್ರಾಂತಿ ಪಡೆಯಬೇಕಾಯ್ತು ಎಂದು ಸಿ.ಪಿ.ಯೋಗೇಶ್ವರ್ ಆರೋಪಕ್ಕೆ ಟಾಂಗ್ ನೀಡಿದ್ದಾರೆ.
ಕಂಡೋರ ದುಡ್ಡಲ್ಲಿ ಸಿನಿಮಾ ಮಾಡಿ ಮೋಸ ಮಾಡಿದವನು ಇವನು. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡ್ತಾನಾ? ಮೆಗಾ ಸಿಟಿ ಎಂದು ಹೇಳಿ ಸಾವಿರಾರು ಜನರನ್ನು ಬೀದಿ ಪಾಲು ಮಾಡಿದವರು ಯಾರು? ಚನ್ನಪಟ್ಟಣಕ್ಕೆ ಶಾಸಕನಾಗಿ ಏನು ಮಾಡಬೇಕು ಮಾಡಿದ್ದೇನೆ. ಆತನ ಸರ್ಟಿಫಿಕೇಟ್ ನನಗೆ ಬೇಕಿಲ್ಲ. ಇನ್ನೇನು ಚುನಾವಣೆ ಹತ್ತಿರ ಬರುತ್ತಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದವರು ಯಾರು? ಆತ ಮಾಡಿದ್ದೇನು? ಎಂಬುದು ಅಖಾಡದಲ್ಲಿ ಗೊತ್ತಾಗುತ್ತೆ ಎಂದು ವಾಗ್ದಾಳಿ ನಡೆಸಿದರು.
ನಾನು ರಾಜಕೀಯಕ್ಕೆ ಬಂದಾಗ ಇವನು ಚಡ್ಡಿ ಹಾಕಿದ್ನೋ ಇಲ್ವೋ, ದೇವೇಗೌಡರ ಕುಟುಂಬಕ್ಕೂ ಚನ್ನಪಟ್ಟಣಕ್ಕೂ ತುಂಬಾ ಹಳೆಯ ನಂಟಿದೆ. ಬಹಿರಂಗ ಚರ್ಚೆಗೆ ಚನ್ನಪಟ್ಟಣಕ್ಕೆ ಬರಲಿ. ಅಲ್ಲಿಯೇ ಮಾತನಾಡಲು ನಾನು ಸಿದ್ಧ ಎಂದು ಕುಮಾರಸ್ವಾಮಿ ಹೇಳಿದ್ದಾರೆ.