ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಬಿಜೆಪಿ – ಕಾಂಗ್ರೆಸ್ – ಜೆಡಿಎಸ್ ಪಕ್ಷಗಳು ತಯಾರಿ ನಡೆಸುತ್ತಿರುವ ಮಧ್ಯೆ ತಮ್ಮ ತಮ್ಮ ಪಕ್ಷಗಳಲ್ಲಿನ ಕೆಲವರು ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ತಲೆ ನೋವಿಗೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕೆಲವರು ಅಪಸ್ವರ ಎತ್ತಿದ್ದು, ಈಗಾಗಲೇ ಈ ರೀತಿ ಮಾಡಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದ ಮುಖಂಡ ಎಂ.ಎ. ಸಲೀಂ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ ಸಿದ್ದರಾಮಯ್ಯ ಅವರೊಂದಿಗೆ ಪಿಸುಮಾತಿನಲ್ಲಿ ಡಿಕೆಶಿ ವಿರುದ್ಧ ಮಾತನಾಡಿದ್ದ ಶಾಸಕ ಅಶೋಕ್ ಪಟ್ಟಣ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಇನ್ನು ಬಿಜೆಪಿಯಲ್ಲಿ ಶಾಸಕ ರೇಣುಕಾಚಾರ್ಯ ಹತ್ತಕ್ಕೂ ಅಧಿಕ ದುರಂಕಾರಿ ಸಚಿವರ ವಿರುದ್ಧ ತಾವು ಪಕ್ಷದ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ಮೈಸೂರಿನಲ್ಲಿ ಬಿಜೆಪಿ ಶಾಸಕ ಹಾಗೂ ಸಂಸದರ ನಡುವೆಯೇ ಕಿತ್ತಾಟ ನಡೆದಿದೆ. ಇವರ ಮಧ್ಯೆ ಸಂಪುಟ ವಿಸ್ತರಣೆಯ ಬಿಸಿ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಟ್ಟುವ ಸಾಧ್ಯತೆ ಇದೆ.
ಅತ್ತ ಜೆಡಿಎಸ್ ಪಕ್ಷದಲ್ಲೂ ಸಹ ಎಲ್ಲವೂ ಸರಿಯಿಲ್ಲ. ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಪಕ್ಷದ ನಾಯಕರ ವಿರುದ್ಧವೇ ನಾಲಿಗೆ ಹರಿ ಬಿಟ್ಟಿದ್ದು ಇದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಶಿವರಾಮೇಗೌಡ ಅವರನ್ನು ಪಕ್ಷದಿಂದ ಹೊರಹಾಕುವ ನಿರ್ಧಾರ ಕೈಗೊಳ್ಳಲು ಕುಮಾರಸ್ವಾಮಿ ಮುಂದಾಗಿದ್ದು, ಹೀಗೆ ಮೂರು ಪಕ್ಷಗಳಲ್ಲಿ ಪ್ರಸಕ್ತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ನಾಯಕರ ತಲೆಬಿಸಿಗೆ ಕಾರಣವಾಗಿರುವುದಂತೂ ಗ್ಯಾರಂಟಿ.