ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರದಲ್ಲಿ ಯಾವುದೇ ಅಸಮಾಧಾನವಿಲ್ಲ. ರಾಷ್ಟ್ರೀಯ ನಾಯಕರ ಮಾತುಗಳನ್ನು ಸಿಎಂ ಬಸವರಾಜ್ ಬೊಮ್ಮಾಯಿ ಪಾಲಿಸಿದ್ದಾರೆ ಅಷ್ಟೇ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸೋಮಣ್ಣ, ಮೂಟೆ ಹೋರುವವರು ಎಲ್ಲಿ ಬೇಕಾದರೂ ಹೋರಬಹುದು. ಒಳ್ಳೆಯ ಕೆಲಸ ಮಾಡುವವರಿಗೆ ಯಾವ ಜಿಲ್ಲೆ ಜವಾಬ್ದಾರಿ ನೀಡಿದರೂ ನಿಭಾಯಿಸಬೇಕು. ನಾನು ಕೂಡ ಬೆಂಗಳೂರು ಜಿಲ್ಲೆ ಕೇಳಿದ್ದೆ. ಆದರೆ ನನಗೆ ಚಾಮರಾಜನಗರ ಕೊಟ್ಟಿದ್ದಾರೆ. ಹಾಗಂತ ಯಾವುದೇ ಅಸಮಧಾನವಿಲ್ಲ. ಅಭಿವೃದ್ಧಿ ಕೆಲಸ ಮಾಡುವವರಿಗೆ ಅಸಮಾಧಾನದ ಮಾತು ಬರುವುದಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ನಾಯಕರು ಏನು ಜವಾಬ್ದಾರಿ ವಹಿಸಿದ್ದಾರೆ ಅದನ್ನು ನಾವು ಮಾಡುತ್ತಿದ್ದೇವೆ. ಹೈಕಮಾಂಡ್ ಸೂಚಿಸಿದಂತೆ ಸಿಎಂ ಪಾಲಿಸಿದ್ದಾರೆ. ಮಾಧ್ಯಮಗಳು ಅನಗತ್ಯವಾಗಿ ಉಪ್ಪು ಖಾರ ಹಾಕುವುದು ಬೇಡ. ಯಾರಿಗೂ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿದರು.