ಮೈಸೂರು: ಹಿಂದೂ ದೇವರ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿರುವುದು ಸರಿಯಲ್ಲ, ಇದರ ಹಿಂದೆ ಬಿಜೆಪಿ ಅಜೆಂಡಾ ಅಡಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮುಸ್ಲಿಂರ ವ್ಯಾಪಾರಕ್ಕೆ ನಿರ್ಬಂಧ ಹಾಕಿರುವುದು ತಪ್ಪು. ನಿರ್ಬಂಧದ ವಿಚಾರದಲ್ಲಿ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ ಎಂಬುದು ಸುಳ್ಳು, ನಾವು ಯಾವುದೇ ಇಕ್ಕಟ್ಟಿಗೆ ಸಿಲುಕಿಲ್ಲ. ಆದರೆ ಬಿಜೆಪಿ ಕೆಲ ವಿವಾದ ಸೃಷ್ಟಿಸಿ ಮತ ಕ್ರೂಢಿಕರಣಕ್ಕೆ ಯತ್ನಿಸುತ್ತಿದೆ ಎಂದು ಹೇಳಿದರು.
ಹಿಜಾಬ್ ವಿವಾದ ಸೃಷ್ಟಿ ಮಾಡಿದ್ದು ಕೂಡ ಬಿಜೆಪಿಯವರು. ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಹಾಕಿಕೊಳ್ಳುವುದರಲ್ಲಿ ತಪ್ಪೇನಿದೆ ? ಹಿಂದೂ ಹೆಣ್ಣುಮಕ್ಕಳು ತಲೆ ಮೇಲೆ ಬಟ್ಟೆ ಹಾಕಿಕೊಳ್ಳಲ್ವಾ ? ಹಿಂದೂ ಸ್ವಾಮೀಜಿಗಳು ತಲೆ ಮೇಲೆ ಖಾವಿ ಹಾಕುತ್ತಾರೆ. ಅದನ್ನು ನೀವು ಪ್ರಶ್ನೆ ಮಾಡುತ್ತೀರಾ ? ವಿವಾದ ಸೃಷ್ಟಿಸಿ ಅರಗಿಸಿಕೊಳ್ಳುತ್ತೇವೆ ಎಂದುಕೊಂಡಿದ್ದಾರೆ ಬಿಜೆಪಿಯವರು. ದ್ವೇಷದ ರಾಜಕಾರಣಕ್ಕೆ ನಮ್ಮ ದೇಶದಲ್ಲಿ ಅವಕಾಶವಿಲ್ಲ. ಜನರು ಬುದ್ಧಿವಂತರಿದ್ದಾರೆ, ಬಿಜೆಪಿ ತಂತ್ರ ಅರ್ಥವಾಗಿದೆ ಎಂದು ಗುಡುಗಿದ್ದಾರೆ.
ಮೊದಲು ಮನುಷ್ಯರಾಗಿ ಬಾಳಬೇಕು, ಮನುಷ್ಯತ್ವ, ಮಾನವೀಯತೆ, ಜನರಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡಬೇಕು ಅದನ್ನು ಬಿಟ್ಟು ಚುನಾವಣೆಗಾಗಿ ದ್ವೇಷದ ರಾಜಕಾರಣ ಮಾಡಿ ಮತ ಕ್ರೂಢಿಕರಿಸಲು ಸಾಧ್ಯವಿಲ್ಲ. ಇದರಿಂದ ಮುಂದೆ ಬಿಜೆಪಿಯವರೇ ತೊಂದರೆಗೆ ಸಿಲುಕುತ್ತಾರೆ. ಯಾರಾದರೂ ಕಾಯಿಲೆ ಬಿದ್ದಾಗ ಅಥವಾ ರೋಗಿಯೊಬ್ಬರಿಗೆ ರಕ್ತದ ಅಗತ್ಯವಿದ್ದಾಗ ಜಾತಿ, ಧರ್ಮವನ್ನು ಕೇಳಿ ಚಿಕಿತ್ಸೆ, ರಕ್ತವನ್ನು ಸೇರಿಸುತ್ತಾರಾ? ಹಾಗೆ ಮಾಡಿದರೆ ರೋಗಿ ಜೀವ ಉಳಿಯಲು ಸಾಧ್ಯವೇ? ಚಿಕಿತ್ಸೆ ನೀಡಬೇಕು ಎಂದರೆ ಆಸ್ಪತ್ರೆಗಳಲ್ಲಿ ವೈದ್ಯರು ಜಾತಿ ಧರ್ಮ ಕೇಳಿ ಚಿಕಿತ್ಸೆ ಕೊಡಲು ಮುಂದಾದರೆ…….ಇಂಥ ಧರ್ಮದವರು ಬರಬೇಡಿ ಎಂದು ಹೇಳಲು ಆರಂಭಿಸಿದರೆ ಪರಿಸ್ಥಿತಿ ಮುಂದೆ ಏನಾಗಬಹುದು ? ಬಿಜೆಪಿ ನಾಯಕರು ಅನಗತ್ಯವಾಗಿ ವಿವಾದ ಸೃಷ್ಟಿಸಿ ಧ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರೆ. ಇಂಥಹ ಧ್ವೇಷದ ರಾಜಕಾರಣದಿಂದ ಮುಂದೆ ಅವರೇ ಇಕ್ಕಟ್ಟಿಗೆ ಸಿಲುಕುವ ಪರಿಸ್ಥಿತಿ ಬರಲಿದೆ. ಅಭಿವೃದ್ಧಿ ಮೇಲೆ ಮತ ಕೇಳಲು ಇವರು ಮಾಡಿದ ಅಭಿವೃದ್ಧಿ ಕೆಲಸವೇನು ? ಹೀಗಾಗಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಗುಡುಗಿದರು.