ಬೆಂಗಳೂರು: ರಾಜ್ಯದಲ್ಲಿ ಆಜಾನ್ ವಿರುದ್ಧ ಭಜನೆ ಅಭಿಯಾನ ಬೆನ್ನಲ್ಲೇ ಇದೀಗ ಹೊಸದೊಂದು ಅಭಿಯಾನ ಆರಂಭವಾಗಿದ್ದು, ಮತ್ತೊಂದು ಧರ್ಮ ಸಂಘರ್ಷದ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆ ದಟ್ಟವಾದಂತಿದೆ.
ದೇವಾಲಯ, ತೀರ್ಥ ಕ್ಷೇತ್ರ, ಪ್ರವಾಸಿ ತಾಣಗಳಿಗೆ ಮುಸ್ಲಿಂ ವಾಹನ ನಿಷೇಧಿಸುವಂತೆ ಹಿಂದೂ ಪರ ಸಂಘಟನೆಗಳು ಹೊಸ ಅಭಿಯಾನ ಆರಂಭಿಸಿವೆ. ಭಾರತ ರಕ್ಷಾ ವೇದಿಕೆಯ ಪ್ರಶಾಂತ್ ಬಂಗೇರಾ, ಇಂತದ್ದೊಂದು ಅಭಿಯಾನಕ್ಕೆ ಕರೆ ನೀಡಿದ್ದು, ದೇವಾಲಯ, ತೀರ್ಥ ಕ್ಷೇತ್ರಗಳಿಗೆ ಹಿಂದೂ ಮಾಲೀಕರ ವಾಹನದಲ್ಲೇ ತೆರಳಿ ಎಂದು ಹೇಳಿದ್ದಾರೆ.
ಹಿಂದೂ ವಾಹನ ಚಾಲಕರು ಈಗಾಗಲೇ ಸಂಕಷ್ಟಕ್ಕೀಡಾಗಿದ್ದಾರೆ. ಗೋ ಮಾಂಸ ತಿನ್ನುವವರ ಜತೆ ಧರ್ಮಕ್ಷೇತ್ರಗಳಿಗೆ ಹೋಗಬೇಡಿ. ಮುಸ್ಲಿಂ ಚಾಲಕರ ವಾಹನ ಬಿಟ್ಟು ಹಿಂದೂ ವಾಹನಗಳಲ್ಲಿಯೇ ತೆರಳಿ. ಈ ನಿಟ್ಟಿನಲ್ಲಿ ಜನರು ಜಾಗೃತರಾಗುವಂತೆ ಮನವಿ ಮಾಡಿದ್ದಾರೆ.
ಮುಸ್ಲಿಂ ವಾಹನ ನಿಷೇಧ ಅಭಿಯಾನದ ವಿರುದ್ಧ ಕಿಡಿ ಕಾರಿರುವ ಟ್ರಾವೆಲ್ ಮಾಲೀಕರು, ನಮ್ಮದು ಕುಶಲ ಕೆಲಸ, ಇದರಲ್ಲಿ ಜಾತಿ, ಧರ್ಮಗಳನ್ನು ಎಳೆದು ತರಬೇಡಿ ಎಂದು ಹೇಳಿದ್ದಾರೆ.
ಒಟ್ಟಾರೆ ಕೋವಿಡ್ ಸಂಕಷ್ಟದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಟ್ರಾವಲ್ ಮಾಲೀಕರಿಗೆ ಇದೀಗ ಆರಂಭವಾಗಿರುವ ಮುಸ್ಲಿಂ ವಾಹನ ನಿಷೇಧ ಅಭಿಯಾನ ಹೊಸ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ.