ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಮತದಾರರ ಓಲೈಕೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಮುಸ್ಲಿಂ ಮತದಾರರ ಮನವೊಲಿಕೆಗಾಗಿ ಸಚಿವ ಎಂಟಿಬಿ ನಾಗರಾಜ್ ಕವ್ವಾಲಿ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಎಂಟಿಬಿ ನಾಗರಾಜ್ ಹಾಗೂ ಅವರ ಪುತ್ರ ನಿತಿನ್ ಇಬ್ಬರೂ ಟೋಪಿ ಹಾಕಿ ಭಾಗವಹಿಸಿದ್ದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕರು ಮುಸ್ಲಿಂ ಸಮುದಾಯದ ಪರವಾಗಿ ಮಾತನಾಡಿದರೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ನಾಯಕರು, ಸಚಿವರೇ ಈಗ ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಚೆನ್ನಭೈರೇಗೌಡ ಕ್ರೀಡಾಂಗಣದಲ್ಲಿ ಸಚಿವರು ನಿನ್ನೆ ರಾತ್ರಿ ಭರ್ಜರಿ ಕವ್ವಾಲಿ ಕಾರ್ಯಕ್ರಮ ಆಯೋಜಿಸಿದ್ದರು. ಕವ್ವಾಲಿ ಕಾರ್ಯಕ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್, ಉರ್ದುವಿನಲ್ಲಿಯೇ ಭಾಷಣ ಆರಂಭಿಸಿದ್ದಾರೆ. ಅಲ್ಲದೇ ಕಾರ್ಯಕ್ರಮದುದ್ದಕ್ಕೂ ಕವ್ವಾಲಿ ಗಾಯಕರ ಮೇಲೆ ಹಣದ ಮಳೆಯನ್ನೇ ಸುರಿಸಲಾಗಿದೆ. ಸಚಿವರ ಕವ್ವಾಲಿ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.