ಬೆಂಗಳೂರು: ಹಿಜಾಬ್, ಹಲಾಲ್, ಆಜಾನ್, ದೇವಸ್ಥಾನಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಬಳಿಕ ಇದೀಗ ಅಕ್ಷಯ ತೃತೀಯ ದಿನ ಮುಸ್ಲಿಂ ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ಖರೀದಿಗೆ ನಿಷೇಧ ಅಭಿಯಾನ ಕುರಿತಾಗಿ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯದ ಆರ್ಥಿಕತೆ ಏನು ಮಾಡಬೇಕು ಅಂದುಕೊಂಡಿದ್ದಾರೆ ? ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿದರು, ಹೋಟೆಲ್ ಗೆ ಹೋಗಬಾರದು ಎಂದು ಹೇಳಿದರು. ಈಗ ಚಿನ್ನ ಖರೀದಿ ಮಾಡಬೇಡಿ ಅಂತಿದ್ದಾರೆ. ಬಿಜೆಪಿ ಕಾರ್ಯಕರ್ತರು ಮುಸ್ಲಿಂ ವ್ಯಾಪಾರಿಗಳ ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿ ಮಾಡಬೇಡಿ ಎಂದು ಅಭಿಯಾನ ಮಾಡುತ್ತಿದ್ದಾರೆ. ವ್ಯಾಪಾರ ವಹಿವಾಟಿಗೂ ಜಾತಿ, ಧರ್ಮದ ಬಣ್ಣ ಹಚ್ಚುತ್ತಿದ್ದರೂ ಸಿಎಂ ಸುಮ್ಮನೆ ಕುಳಿತ್ತಿದ್ದಾರೆ. ಹೀಗೆ ಮುಂದುವರೆದರೆ ಆರ್ಥಿಕತೆಯ ಭವಿಷ್ಯ ಏನಾಗಬೇಡ ? ಕಿಂಚಿತ್ತಾದರೂ ಯೋಚನೆ ಬೇಡವೇ ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಜಾಬ್, ಹಲಾಲ್ ಎಂದು ವಿವಾದ ಮಾಡಿದರು. ಶಾಲೆಗಳಲ್ಲಿ ಮಕ್ಕಳ ಭವಿಷ್ಯದ ಗತಿಯೇನು ? ಈಗ ವ್ಯಾಪಾರಕ್ಕೆ ನಿಷೇಧ ಹೇರಿದರೆ ಆರ್ಥಿಕತೆ ಗತಿಯೇನು ? ಸಿಎಂ ಬೊಮ್ಮಾಯಿ, ಗೃಹ ಸಚಿವರು ಏನ್ ಮಾಡ್ತಿದ್ದಾರೆ ? ರಾಜ್ಯದಲ್ಲಿ ಇಷ್ಟೆಲ್ಲ ಸಮಸ್ಯೆಗಳು ಎದುರಾಗುತ್ತಿದ್ದರೂ ಇದನ್ನೆಲ್ಲ ನೋಡಿಕೊಂಡು ವಿಪಕ್ಷದವರು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.