ಕಾರ್ಕಳ: ಬಿಜೆಪಿ, ಬಜರಂಗದಳದಿಂದಲೇ ಕೋಮುಗಲಭೆ ಸೃಷ್ಟಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ, ರಾಹುಲ್ ಗಾಂಧಿ ಮೆಚ್ಚಿಸಲು ಮಾಡುತ್ತಿರುವ ಆರೋಪಗಳಿವು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಹಿಜಾಬ್ ವಿವಾದ ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋದವರು ಕಾಂಗ್ರೆಸ್ ನಾಯಕರು. ವಿವಾದ ಹುಟ್ಟುಹಾಕಿದ್ದು ಕಾಂಗ್ರೆಸ್ಸಿಗರು. ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಹರ್ಷ ಹತ್ಯೆ ಪ್ರಕರಣದ ವಿಚಾರವಾಗಿಯೂ ಮಾತನಾಡಿದ ಈಶ್ವರಪ್ಪ, ಹರ್ಷನ ಹತ್ಯೆಗೈದ ಮುಸ್ಲಿಂ ಗೂಂಡಾಗಳನ್ನು ಬಂಧಿಸಲಾಗಿದೆ. ಕೊಲೆಗಡುಕರನ್ನು ಮುಸ್ಲಿಂ ಗೂಂಡಾಗಳು ಎಂದು ಕರೆಯದೇ ಏನಂತ ಕರೀಬೇಕು ? ಸಿದ್ದರಾಮಯ್ಯ, ಡಿಕೆಶಿ ಏನಂತ ಕರೀತಾರೆ ? ಹಿಂದೂ-ಮುಸ್ಲಿಂಮರು ಸಮಾಜದ ಎರಡು ಕಣ್ಣುಗಳೆಂದು ನೋಡಬೇಕಿತ್ತು. ಹಾಗೆ ನೋಡಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ. ಕೇವಲ ಮುಸ್ಲಿಂರನ್ನು ಸಂತೃಪ್ತಿಪಡಿಸುವ ಹೇಳಿಕೆ ಕೊಡುತ್ತಿದ್ದಾರೆ ಎಂದು ಗುಡುಗಿದರು.
ಇದೇ ವೇಳೆ 40% ಕಮಿಷನ್ ಆರೋಪ ವಿಚಾರವಾಗಿ ಮಾತನಾಡಿದ ಸಚಿವರು, ಗುತ್ತಿಗೆದಾರ ಕೆಂಪಣ್ಣ ಅನಗತ್ಯವಾಗಿ ಪದೇ ಪದೆ ಇಂತಹ ಆರೋಪ ಮಾಡುತ್ತಿದ್ದಾರೆ. ಈವರೆಗೆ ಒಂದೇ ಒಂದು ಉದಾಹರಣೆ ಕೊಟ್ಟಿಲ್ಲ. ಇಂತವರು 40% ಕೇಳುತ್ತಿದ್ದಾರೆ ಎಂದು ಹೇಳಿದ್ದರೆ ಒಪ್ಪುತ್ತಿದ್ದೆ. ಬರಿ ಸುಳ್ಳು ಆಪಾದನೆ ಸೃಷ್ಟಿ ಮಾಡಿದರೆ ಜನ ನಂಬಲ್ಲ ಎಂದರು.