ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಸೇತುವೆಗಳು ಮುಳುಗಡೆಯಾಗಿವೆ. ಈ ನಡುವೆ ಪಿಕಪ್ ವಾಹನವೊಂದು ಮುಳುಗಡೆಯಾಗಿರುವ ಸೇತುವೆ ಮಧ್ಯೆ ಸಿಲುಕಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲ-ಕಾಂತುಕೋಡಿ ಸೇತುವೆಯಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರ ಪಿಕಪ್ ವಾಹನ ಚಾಲಕ, ಸೇತುವೆ ಮೇಲೆ ವಾಹನ ಚಲಾಯಿಸಿದ್ದಾನೆ. ಇದೇ ವೇಳೆ ಭಾರಿ ಮಳೆಯಿಂದಾಗಿ ನದಿಯಲ್ಲಿ ನೀರು ಏಕಾಏಕಿ ಹೆಚ್ಚಿದ್ದು, ಸೇತುವೆ ಮುಳುಗಡೆಯಾಗಿದೆ. ಪಿಕಪ್ ವಾಹನ ಸೇತುವೆ ಮಧ್ಯೆ ಸಿಲುಕಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಆತಂಕದಲ್ಲಿ ವಾಹನದಲ್ಲಿದ್ದವರು ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ.
ಸ್ಥಳೀಯರು ಹಗ್ಗದ ಸಹಾಯದಿಂದ ಪಿಕಪ್ ವಾಹನದಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಮಳೆ ಅಬ್ಬರದ ನಡುವೆ ಅಪಾಯದ ಮಟ್ಟದಲ್ಲಿ ನದಿ ಹರಿಯುತ್ತಿದ್ದರೂ ಪಿಕಪ್ ವಾಹನ ಚಾಲಕ ದುಸ್ಸಾಹಸ ಮಾಡಲು ಹೋಗಿ ಜನರ ಜೀವಕ್ಕೆ ಅಪಾಯತಂದೊಡ್ದಿದ್ದ, ಸ್ಥಳೀಯರ ಸಮಯಪ್ರಜ್ಞೆಯಿಂದ ವಾಹನದಲ್ಲಿದ್ದವರು ಬಚಾವ್ ಆಗಿದ್ದಾರೆ.