ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಎಂಇಎಸ್ ನಿಷೇಧ ಮಾಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಎಂಇಎಸ್ ಪುಂಡರ ಕಿಡಿಗೇಡಿತನದ ಬಗ್ಗೆ ಚರ್ಚೆ ನಡೆದಿದ್ದು, ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಎಂಇಎಸ್ ನವರು ದೇಶದ್ರೋಹಿಗಳು. ಇಂತವರ ವಿರುದ್ಧ ಕಠಿಣ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು.
ಉದ್ದೇಶಪೂರ್ವಕವಾಗಿ ಶಾಂತಿ, ಕಾನೂನು ವ್ಯವಸ್ಥೆಗೆ ಭಂಗ ತರುವಂತಹ ಕೃತ್ಯ ನಡೆದಿದೆ. ನಮ್ಮ ನೀರು, ಅನ್ನ ತಿಂದು ನಮಗೆ ದ್ರೋಹ ಬಗೆಯುವ ಕೆಲಸಕ್ಕೆ ಎಂಇಎಸ್ ಕೈಹಾಕಿರುವುದು ಖಂಡನೀಯ. ಭಾಷಾಭಿಮಾನ ಇರಬೇಕು ಆದರೆ ದುರಭಿಮಾನ, ದ್ವೇಷ, ಅಸೂಯೆ ಸಹಿಸಲಾಗದು. ಎಂಇಎಸ್ ಪುಂಡರು ಕನ್ನಡಿಗರ ಸ್ವಾಭಿಮಾನ, ಸಹನೆಯನ್ನು ಕೆಣಕುವ ಕೆಲಸ ಮಾಡಿದ್ದಾರೆ. ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತೆ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಕಿಡಿಕಾರಿದರು.
ಎಂಇಎಸ್ ಬ್ಯಾನ್ ಮಾಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಕಾನೂನಿನಲ್ಲಿ ಅವಕಾಶವಿದ್ದರೆ ಮುಲಾಜಿಲ್ಲದೇ ಎಂಇಎಸ್ ನಿಷೇಧ ಮಾಡಬೇಕು. ಎಂಇಎಸ್ ಪುಂಡರನ್ನು ಗಡಿಪಾರು ಮಾಡುವ ಮೂಲಕ ಕಠಿಣ ಸಂದೇಶ ರವಾನಿಸಬೇಕು ಎಂದು ಆಗ್ರಹಿಸಿದರು.