ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ಪೀಠ ತ್ಯಾಗಕ್ಕೆ ಒತ್ತಡ ಹೆಚ್ಚಾಗತೊಡಗಿದೆ. ಶ್ರೀಗಳು ಕೂಡಲೇ ಪೀಠ ತ್ಯಾಗ ಮಾಡಬೇಕು ಇಲ್ಲವಾದರೆ ಅವರನ್ನು ಸ್ಥಾನದಿಂದ ವಜಾಗೊಳಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಚಿತ್ರದುರ್ಗ ತಾಲೂಕಿನ ಸಿಬಾರದ ನಿಜಲಿಂಗಪ್ಪ ಸ್ಮಾರಕ ಭವನದಲ್ಲಿ ಇಂದು ಮಾಜಿ ಸಚಿವ ಎಚ್. ಏಕಾಂತಯ್ಯ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರ ಸಮಾಲೋಚನಾ ಸಭೆ ನಡೆದಿದ್ದು, ಮಠದ ದೈನಂದಿನ ಧಾರ್ಮಿಕ ಕೈಂಕರ್ಯ ಹಾಗೂ ಆಡಳಿತಾತ್ಮಕ ಚಟುವಟಿಕೆ ನಡೆಸುವ ಸಲುವಾಗಿ ನೂತನ ಪೀಠಾಧ್ಯಕ್ಷರನ್ನು ನೇಮಕ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.
ಈ ಸಭೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದು, ಏಕಾಂತಯ್ಯನವರು, ಮುರುಘಾ ಶ್ರೀಗಳು ಪೀಠ ತ್ಯಾಗ ಮಾಡಬೇಕು ಎಂದು ಹೇಳುತ್ತಿದ್ದಂತೆ ಸಭೆಯಲ್ಲಿ ಭಾಗವಹಿಸಿದ್ದವರು ಚಪ್ಪಾಳೆ ತಟ್ಟಿ ಇದನ್ನು ಅನುಮೋದಿಸಿದ್ದಾರೆ. ಮುರುಘಾ ಪರಂಪರೆಯ ಉಳಿವಿಗಾಗಿ ಮಠಕ್ಕೆ ಹೊಸ ಪೀಠಾಧ್ಯಕ್ಷರು ಬೇಕಾಗಿದ್ದಾರೆ. ಇದಕ್ಕಾಗಿ ಕಾನೂನು ಹೋರಾಟ ನಡೆಸಲು ಎಲ್ಲರೂ ಸಿದ್ದರಾಗಬೇಕು ಎಂದು ಅವರು ಹೇಳಿದ್ದಾರೆ.