ಚಿತ್ರದುರ್ಗ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾಶ್ರೀ ಡಾ.ಶಿವಮೂರ್ತಿ ಶರಣರನ್ನು ಬಂಧಿಸುವಂತೆ ಆಗ್ರಹಿಸಿ ಚಿತ್ರದುರ್ಗದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ಈವರೆಗೆ ಪೊಲೀಸರು ಶ್ರೀಗಳನ್ನು ಬಂಧಿಸದೇ ಅವರನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ತಕ್ಷಣ ಸ್ವಾಮೀಜಿಗಳನ್ನು ಹಾಗೂ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿಎಎಸ್ ಎಸ್ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿವೆ.
ವಿದ್ಯಾರ್ಥಿನಿಯರು ತಮ್ಮ ಮೇಲೆ ಮುರುಘಾಶ್ರೀಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಚಿತ್ರದುರ್ಗದಿಂದ ಮೈಸೂರಿಗೆ ಹೋಗಿ ಪ್ರಕರಣ ದಾಖಲಿಸಿದ್ದಾರೆ. ಶ್ರೀಗಳು ಸೇರಿದಂತೆ ಐವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ನಾಲ್ಕು ದಿನಗಳಾಗಿವೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದರೂ ಪೊಲೀಸರು ಶ್ರೀಗಳನ್ನು ಬಂಧಿಸದೇ ಮಠದಲ್ಲಿ ಹೈಡ್ರಾಮ ಮಾಡುತ್ತಿದ್ದಾರೆ. ಇದೇ ಆರೋಪ ಓರ್ವ ಸಾಮಾನ್ಯ ವ್ಯಕ್ತಿ ಮೇಲೆ ಬಂದಿದ್ದರೆ ಇಷ್ಟೊತ್ತಿಗಾಗಲೇ ಆತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸುತ್ತಿದ್ದರು. ಆದರೆ ಓರ್ವ ಸ್ವಾಮೀಜಿ ಮೇಲೆ ಕೇಸ್ ದಾಖಲಾದರೂ ಕ್ರಮ ಕೈಗೊಳ್ಳದಿರುವುದು ಯಾಕೆ? ಸ್ವಾಮೀಜಿಗೊಂದು, ಸಾಮಾನ್ಯನಿಗೊಂದು ನ್ಯಾಯವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ವಿದ್ಯಾರ್ಥಿನಿಯರು ಮಠದಲ್ಲಿ ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ಮುರುಘಾಶ್ರೀಗಳ ವಿರುದ್ಧ ಇಂದು ಆರೋಪ ಕೇಳಿಬಂದಿದೆ. ಶ್ರೀಗಳನ್ನು ಬಂಧಿಸದೇ ಹೀಗೆ ದಿನಕ್ಕೊಂದು ಹೈಡ್ರಾಮ ಮಾಡಿ ಅವರಿಗೆ ರಕ್ಷಿಸುತ್ತಿದ್ದರೆ ಸಂತ್ರಸ್ತ ಮಕ್ಕಳ ಗತಿಯೇನು? ಆ ಮಕ್ಕಳ ಭವಿಷ್ಯದ ಗತಿಯೇನು? ಅವರನ್ನು ರಕ್ಷಿಸುವವರು ಯಾರು? ವಿದ್ಯಾಭ್ಯಾಸಕ್ಕೆಂದು ಬಂದ ಬಡ ಮಕ್ಕಳ ಮೇಲೆ ಇಂತಹ ದೌರ್ಜನ್ಯಗಳು ನಡೆದರೆ ಮಕ್ಕಳು ಏನು ಮಾಡಬೇಕು? ಸಂತ್ರಸ್ತ ಮಕ್ಕಳಿಗೆ ನ್ಯಾಯ ಒದಗಿಸಿಕೊಡಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ನಾಳೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.