ಬೆಂಗಳೂರು: ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಗಳನ್ನು ಈವರೆಗೂ ಬಂಧಿಸದೇ ಇರುವ ಕ್ರಮ ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಹೆಚ್.ಎಂ.ವೆಂಕಟೇಶ್ ಸುಪ್ರೀಂ ಕೋರ್ಟ್ ಗೆ ದೂರು ನೀಡಿದ್ದಾರೆ.
ಮುರಿಘಾಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ಸಂತ್ರಸ್ತ ಮಕ್ಕಳಿಗಿಂತ ಆರೋಪಿ ಶ್ರೀಗಳಿಗೆ ಹೆಚ್ಚು ರಕ್ಷಣ ನೀಡಲಾಗುತ್ತಿದೆ. ಪ್ರಕರಣ ದಾಖಲಾಗಿ 6 ದಿನಗಳಾದರೂ ಇನ್ನೂ ಆರೋಪಿ ಬಂಧನವಾಗಿಲ್ಲ. ಅಲ್ಲದೇ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಪ್ರಾಥಮಿಕ ತನಿಖೆ ನಡೆಸದೇ ಚಿತ್ರದುರ್ಗಕ್ಕೆ ಕೇಸ್ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ದೂರಿದ್ದಾರೆ.
ಆರೋಪಿ ಸ್ಥಾನದಲ್ಲಿರುವ ಮುರುಘಾಶ್ರೀಗಳಿಗೆ ರಾಜಕಾರಣಿಗಳ ನಿಕಟ ಸಂಪರ್ಕವಿದ್ದು, ರಾಜಕೀಯ ಪ್ರಭಾವದಿಂದಲೇ ಅವರನ್ನು ಪೊಲೀಸರು ಬಂಧಿಸುತ್ತಿಲ್ಲ. ಅಲ್ಲದೇ ಐ ಎ ಎಸ್, ಐಪಿಎಸ್ ಅಧಿಕಾರಿಗಳ ಜತೆಗೂ ಸ್ವಾಮೀಜಿಗಳಿಗೆ ಸಂಪರ್ಕವಿದ್ದು ಇದರಿಂದ ಸಂತ್ರಸ್ತರಿಗಿಂತ ಹೆಚ್ಚಾಗಿ ಆರೋಪಿಗೆ ರಕ್ಷಣೆ ನೀಡಲಾಗುತ್ತಿದೆ. ಸಂತ್ರಸ್ತ ಬಾಲಕಿಯರಿಗೆ ನ್ಯಾಯ ಸಿಗುವ ಭರವಸೆ ಕಾಣುತ್ತಿಲ್ಲ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ವೆಂಕಟೇಶ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.