ಚಿತ್ರದುರ್ಗ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಮುರುಘಾಶ್ರೀಗಳನ್ನು ಬಂಧಿಸುವಂತೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಸರ್ಕಾರ ಹಾಗೂ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ನೀಲಕಂಠೇಶ್ವರ ದೇವಸ್ಥಾನದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದ ಪ್ರಗತಿಪರ ಸಂಘಟನೆ ಹಾಗೂ ಡಿ ಎಎಸ್ ಎಸ್ ಸಂಘಟನೆ ಕಾರ್ಯಕರ್ತರು ಮುರುಘಾ ಮಠದ ಡಾ.ಶಿವಮೂರ್ತಿ ಶರಣರನ್ನು ಬಂಧಿಸುವಂತೆ ಒತ್ತಾಯಿಸಿದರು.
ಸಾಮಾನ್ಯ ಜನರಿಗೆ ಒಂದು ನ್ಯಾಯ, ಸ್ವಾಮೀಜಿಗಳಿಗೆ ಒಂದು ನ್ಯಾಯವೇ? ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರ ಕಾರು ತಡೆದು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಾಲಕಿಯರು ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿ 6 ದಿನಗಳು ಕಳೆದಿವೆ. ನ್ಯಾಯಾಲಯದ ಮುಂದೆಯೂ ಸಂತ್ರಸ್ತ ಮಕ್ಕಳು ಹೇಳಿಕೆ ದಾಖಲಿಸಿದ್ದಾರೆ ಇಷ್ಟೆಲ್ಲ ಆದರೂ ಸ್ವಾಮೀಜಿಗಳನ್ನು ಬಂಧಿಸದೇ ಸರ್ಕಾರ ಹಾಗೂ ಪೊಲಿಸ್ ಇಲಾಖೆ ಸ್ವಾಮೀಜಿ ರಕ್ಷಣೆಗೆ ತೊಡಗಿದೆ. ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರೂ ಜಿಲ್ಲಾಧಿಕಾರಿಗಳು ಬೇಜವಾಬ್ದಾರಿ ಮೆರೆದಿದ್ದು, ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಕಿಡಿಕಾರಿದರು.