ಬೆಂಗಳೂರು: ಚಿತ್ರದುರ್ಗದ ಮುರುಘಾಶ್ರೀಗಳ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿ.ಟಿ.ರವಿ, ತನಿಖೆಯ ಮೊದಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಯಾವುದೇ ಆರೋಪ ಕೇಳಿಬಂದಾಗಲೂ ತನಿಖೆ ಮೊದಲೇ ನಿರಪರಾಧಿ ಪಟ್ಟಕಟ್ಟಲು ಆಗಲ್ಲ, ಹಾಗೆಯೇ ಆರೋಪ ಕೇಳಿದ ಮಾತ್ರಕ್ಕೆ ಅಪರಾಧಿ ಎಂದು ಪಟ್ಟಕಟ್ಟಲು ಸಾಧ್ಯವಿಲ್ಲ. ಪ್ರಕರಣದ ಬಗ್ಗೆ ಮೊದಲು ತನಿಖೆ ನಡೆಯಲಿ. ತನಿಖೆಯ ವೇಳೆ ಮಾತನಾಡಿದರೆ ತಪ್ಪಾಗುತ್ತದೆ ಎಂದರು.
ಮುರುಘಾಶ್ರೀಗಳು ಕಳೆದ ಹಲವು ದಶಕಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಅಂತವರ ಬಗ್ಗೆ ಆರೋಪ ಸರಿಯಲ್ಲ. ಆರೋಪಗಳು ಬಂದಾಗ ನಾಡಿನ ಎಲ್ಲಾ ಜನರಿಗೂ ಕಾನೂನು ಒಂದೆ. ಆಳಿನಿಂದ ಹಿಡಿದು ಅರಸನವರೆಗೂ ಪ್ರತಿಯೊಬ್ಬರಿಗೂ ಕಾನೂನು ಒಂದೆ ಯಾವುದೇ ಭೇದ ಭಾವ ವಿಲ್ಲ. ಆರೋಪದ ಬಗ್ಗೆ ನಿಸ್ಪಕ್ಷಪಾತದ ತನಿಖೆ ನಡೆಯುತ್ತದೆ ಎಂಬ ವಿಶ್ವಾಸವಿದೆ. ನಮ್ಮಲ್ಲಿ ಒಂದು ಗಾದೆ ಮಾತಿದೆ ನದಿ ಮೂಲ ಋಷಿ ಮೂಲವನ್ನು ಹುಡುಕಬಾರದು ಎಂದು ಹಾಗೇ ತನಿಖೆ ಹಂತದಲ್ಲಿರುವಾಗ ಈ ಬಗ್ಗೆ ಹೆಚ್ಚಿನ ಮಾತನಾಡಲು ಹೋಗಲ್ಲ ಎಂದು ಹೇಳಿದರು.