ಶಿವಮೊಗ್ಗ: ರಾಜ್ಯದ ಪಿಯು ಕಾಲೇಜುಗಳಲ್ಲಿ ಹಿಜಾಬ್ ಸಂಘರ್ಷ ಮುಂದುವರೆದಿದ್ದು, ಕಾಲೇಜು ಆಡಳಿತ ಮಂಡಳಿಯಿಂದ ಸಸ್ಪೆಂಡ್ ಆಗಿದ್ದ 58 ವಿದ್ಯಾರ್ಥಿನಿಯರು ಇದೀಗ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ತಾಲೂಕಿನ ಕರ್ನಾಟಕ ಪಬ್ಲಿಕ್ ಪದವಿಪೂರ್ವ ಕಾಲೇಜಿನ 58 ವಿದ್ಯಾರ್ಥಿನಿಯರು ಕಾಲೇಜು ಎದುರು ಬಿತ್ತಿ ಪತ್ರಗಳನ್ನು ಹಿಡಿದು, ಹಿಜಾಬ್ ಬೇಕು ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ತಮ್ಮನ್ನು ಸಸ್ಪೆಂಡ್ ಮಾಡಿರುವ ಕ್ರಮವನ್ನು ಪ್ರಶ್ನಿಸಿದ್ದಾರೆ.
ನಿನ್ನೆ ಕಾಲೇಜಿಗೆ ಹಿಜಾಬ್ ಧರಿಸಿ ಆಗಮಿಸಿದ್ದ 58 ವಿದ್ಯಾರ್ಥಿನಿಯರನ್ನು ತಡೆದ ಕಾಲೇಜು ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳು ಹಿಜಾಬ್ ತೆಗೆದು ತರಗತಿಗೆ ಬರುವಂತೆ ಸೂಚಿಸಿದ್ದರು. ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರಲು ಅವಕಾಶ ನೀಡುವಂತೆ ಕೋರಿದ್ದರು. ಇದಕ್ಕೆ ಒಪ್ಪದ ಪ್ರಾಂಶುಪಾಲರು ವಿದ್ಯಾರ್ಥಿನಿಯರನ್ನು ವಾಪಸ್ ಕಳುಹಿಸಿದ್ದರು. ಇಂದು ಬೆಳಿಗ್ಗೆ 58 ವಿದ್ಯಾರ್ಥಿನಿಯರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿತ್ತು.
ಸಸ್ಪೆಂಡ್ ಆದೇಶದಿಂದ ಕಂಗಾಲಾದ ವಿದ್ಯಾರ್ಥಿನಿಯರು ಇದೀಗ ಕಾಲೇಜು ಎದುರು ಹಿಜಾಬ್ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಏಕಾಏಕಿ ತಮಗೆ ಕಾಲೇಜಿನಿಂದ ಸ್ಪಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಪ್ರಾಂಶುಪಾಲರ ಈ ಧೋರಣೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.