ಶಿಕ್ಷಣ ಇಲಾಖೆ ಪಠ್ಯ ಬದಲಾವಣೆಗೆ ತಯಾರಿ ನಡೆಸಿಕೊಂಡಿದ್ದು, ಪರಿಷ್ಕೃತ ಪಠ್ಯ ಜಾರಿಗೊಳಿಸಲು ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಹುಶಃ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕೃತ ಪಠ್ಯ ಜಾರಿಗೊಳ್ಳಬಹುದು ಎನ್ನಲಾಗಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯಲ್ಲೂ ಪಠ್ಯ ಪರಿಷ್ಕರಣೆ ನಡೆದಿತ್ತು. ಡಾ.ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ಬರಗೂರು ರಾಮಚಂದ್ರಪ್ಪ ಪರಿಷ್ಕರಣೆ ಮಾಡಿದ ಪಠ್ಯಕ್ಕೆ ಶಿಕ್ಷಣ ಸಚಿವರು ಕತ್ತರಿ ಹಾಕಿದ್ದು, ಈಗ ಜಾರಿಯಲ್ಲಿರುವ ಪಠ್ಯದಲ್ಲಿ ಲೋಪವಿದೆ. ನಮ್ಮ ಋಷಿಗಳು, ಶರಣರ ಬಗ್ಗೆ ಏಕವಚನ ಪ್ರಯೋಗ ಆಗಿದೆ. ಅಕ್ಕಮಹಾದೇವಿ, ಶರಣರ ಪಠ್ಯವನ್ನು ಚಿಕ್ಕದು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು, ಪ್ರಸ್ತುತ ನಡೆಯುತ್ತಿರುವ ಪಠ್ಯ ಪರಿಷ್ಕರಣೆಯನ್ನು ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಸಮಿತಿ ನೋಡಿಕೊಳ್ಳುತ್ತಿದೆ.
ಈ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವ ನಾಗೇಶ್ ರವರು, ಪ್ರಸ್ತುತ ಇರುವ ಪಠ್ಯದಲ್ಲಿ ಇತಿಹಾಸದ ಬಗ್ಗೆ ಒಂದಷ್ಟು ತಪ್ಪುಗಳು ಆಗಿದ್ವು, ಅವುಗಳನ್ನ ಸರಿ ಮಾಡುವ ಕೆಲಸ ಮಾಡಿದ್ದೇವೆ. ಮುಂದಿನ ಅಕಾಡೆಮಿ ಒಳಗಡೆ ಪರಿಷ್ಕೃತ ಪಠ್ಯ ಪುಸ್ತಕಗಳು ಮಕ್ಕಳಿಗೆ ಸಿಗಲಿದೆ. ಸಮಿತಿಯ ವರದಿಯನ್ನು ಗಮನದಲ್ಲಿಟ್ಕೊಂಡು ಪಠ್ಯ ಪರಿಷ್ಕರಣೆ ಆಗಲಿದೆ. ರಾಜಕೀಯ ಉದ್ದೇಶ ಇಟ್ಟುಕೊಂಡು ನಾವು ಪಠ್ಯ ಪರಿಷ್ಕರಣೆ ಮಾಡಿಲ್ಲ. ಪೂರ್ಣವಾಗಿ ಪಠ್ಯ ಪರಿಷ್ಕರಣೆ ಮಾಡುತ್ತಿಲ್ಲ, ಪಠ್ಯ ಪುಸ್ತಕದಲ್ಲಿದ್ದ ತಪ್ಪುಗಳನ್ನ ಸರಿ ಮಾಡುತ್ತಿದ್ದೇವೆ ಎಂದಿದ್ದಾರೆ.
ನಮ್ಮ ಮಹರ್ಷಿಗಳನ್ನು ಏಕವಚನದಲ್ಲಿ ಸಂಭೋಧಿಸಿದ್ದಾರೆ. ವಾಲ್ಮೀಕಿ, ರಾಮನ ಬಗ್ಗೆ ಏಕವಚನ ಪ್ರಯೋಗವಾಗಿದೆ. ಅಕ್ಕಮಹಾದೇವಿಯ ಇತಿಹಾಸ ದೊಡ್ಡದಿದೆ, ಆದರೆ ಅದನ್ನ ಚಿಕ್ಕ ಪಾಠವಾಗಿ ಮಾಡಿದ್ದಾರೆ. ಇಡೀ ಪಠ್ಯದಲ್ಲಿ ಭಾರತೀಯ ವಿಜ್ಞಾನಿಗಳ ಬಗ್ಗೆ ಒಂದು ಶಬ್ದವಿಲ್ಲ. ಬೇರೆ ದೇಶಗಳು ಅಂಬೆಗಾಲಿಡಲು ಶುರು ಮಾಡಿದ್ದಾಗ, ಭಾರತದಲ್ಲಿ ವಿಜ್ಞಾನದ ಆವಿಷ್ಕಾರಗಳೆ ಶುರುವಾಗಿದ್ವು, ಅಂತವರ ಬಗ್ಗೆ ತಿಳಿಸುವ ಪ್ರಯತ್ನ ಮಾಡಿಲ್ಲಾ. ಒಟ್ಟಿನಲ್ಲಿ ನಮ್ಮ ಮಕ್ಕಳಿಗೆ ನಮ್ಮ ಭಾರತದ ಇತಿಹಾಸ, ಭಾರತದ ವಿಜ್ಞಾನದ ಬಗ್ಗೆ ನಿಜವಾದ ಅಂಶಗಳನ್ನು, ಮೌಲ್ಯಗಳನ್ನು ಕೊಡುವಂತ ಕೆಲಸ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.