ಮಂಡ್ಯ: ಕರ್ನಾಟಕದಲ್ಲಿ ಇಂದು ಎಲ್ಲೆಡೆ ಬಿಜೆಪಿ ಅಲೆಯಿದೆ. ಹಳೆ ಮೈಸೂರು, ಮಂಡ್ಯ ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಮಂಡ್ಯ ವಿವಿ ಮೈದಾನದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಸಮಾವೇಶ್ ಉದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಇಂದು ಎಲ್ಲೆಡೆ ಬಿಜೆಪಿ ಅಲೆಯಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸುನಾಮಿ ಏಳಲಿದೆ. ಇಂದು ರಾಜ್ಯಕ್ಕೆ ಅಮಿತ್ ಶಾ ಎಂಟ್ರಿಯಿಂದಾಗಿ ಸುನಾಮಿ ಅಲೆಯಂತೆ ಬಿಜೆಪಿ ಪರ ಅಲೆ ಏಳಲಿದೆ. 2023ಕ್ಕೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಕಳೆದ 30 ವರ್ಷಗಳಿಂದ ಕಾಂಗ್ರೆಸ್, ಜೆಡಿಎಸ್ ಏನೂ ಮಾಡಿಲ್ಲ. ಸಿದ್ದರಾಮಯ್ಯ ಸರ್ಕಾರ ಬರಿ ಆ ಭಾಗ್ಯ, ಈ ಭಾಗ್ಯ ಎನ್ನುತ್ತಾ ರಾಜ್ಯಕ್ಕೆ ದೌರ್ಭಾಗ್ಯ ಕೊಟ್ಟಿತು. ಅನ್ನ ಭಾಗ್ಯದಲ್ಲಿಯೂ ಕನ್ನ ಹಾಕುವ ಕೆಲಸ ಮಾಡಿತು. ಕಾಂಗ್ರೆಸ್ ಜೆಡಿಎಸ್ ನಿಂದ ಜನರು ಬೇಸತ್ತು ಹೋಗಿದ್ದಾರೆ. ಮೈಶುಗರ್ ಕಾರ್ಖಾನೆ ಮೂರ್ನಾಲ್ಕು ವರ್ಷಗಳಿಂದ ಬಂದ್ ಆಗಿತ್ತು. ಹಿಂದಿನ ಸರ್ಕಾರಗಳು ಕಾರ್ಖಾನೆ ಆರಂಭಕ್ಕೆ ಆಸಕ್ತಿ ತೋರಿಸಲಿಲ್ಲ. ಆದರೆ ನಮ್ಮ ಬಿಜೆಪಿ ಸರ್ಕಾರ ಕಾರ್ಖಾನೆ ಪುನರಾರಂಭ ಮಾಡಿದೆ. ಇದನ್ನು ಸರ್ಕಾರಿ ಸ್ವಾಮ್ಯದ ಕಾರ್ಖಾನೆಯನ್ನಾಗಿ ಮಾರ್ಪಡಿಸುತ್ತೇವೆ. ಮೈ ಶುಗರ್ ಕಾರ್ಖಾನೆಯಲ್ಲಿ ಬರುವ ವರ್ಷ ಎಥನಾಲ್ ಘಟಕ ಸ್ಥಾಪನೆ ಮಾಡುತ್ತೇವೆ. ಮಂಡ್ಯ ಜಿಲ್ಲೆಯ ನೀರಾವರಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದು ಬಿಜೆಪಿ ಸರ್ಕಾರ. ಬೆಂಗಳೂರು-ಮೈಸೂರು ಸೂಪರ್ ಫಾಸ್ಟ್ ಹೆದ್ದಾರಿ ನಿರ್ಮಾಣ ಮಾಡಿದ್ದು, ರೈಲು ನೀಡಿದ್ದು ನಮ್ಮ ಡಬಲ್ ಎಂಜಿನ್ ಸರ್ಕಾರ. ನಮ್ಮ ಸರ್ಕಾರ ಮಾತು ಕೊಟ್ಟಂತೆ ನಡೆದುಕೊಳ್ಳುತ್ತದೆ ಎಂದು ಹೇಳಿದರು.