ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ಕರೆ ನೀಡಿರುವ ಭಾರತ್ ಬೆಂದ್ ಗೆ ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗಿದ್ದು, ಮುಂಜಾನೆಯಿಂದಲೇ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.
ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೇ ರಸ್ತೆಗಿಳಿದಿರುವ ಅನ್ನದಾತ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿಕ್ಕಮಗಳೂರು, ಹುಬ್ಬಳ್ಳಿ, ಗದಗ, ಕೊಪ್ಪಳ, ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರು ರಸ್ತೆ ತಡೆ ನಡೆಸಿ, ಟೈಯರ್ ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನಾ ನಿರತ ರೈತರು ರಸ್ತೆ ಮಧ್ಯೆಯೇ ಉಪಹಾರ ಸೇವಿಸಿ ಪ್ರತಿಭಟಿಸಿದರೆ, ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸಿರುವ ರೈತರು, ಎತ್ತಿನಗಾಡಿಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಧರಣಿ ನಡೆಸಿದ್ದಾರೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಚಾಮರಾಜನಗರ, ಮೈಸೂರು, ಕೋಲಾರ ಜಿಲ್ಲೆಗಳಲ್ಲಿ ಬಸ್ ಗಳಿಲ್ಲದೇ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.