ಬೆಂಗಳೂರು: ಮೀಸಲಾತಿ ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಸರ್ಕಾರ ಒಕ್ಕಲಿಗರಿಗೆ 2C, ಲಿಂಗಾಯಿತರಿಗೆ 2D ಮೀಸಲಾತಿ ಘೋಷಣೆ ಮಾಡಿದೆ. ಸರ್ಕರದ ಧೋರಣೆ ಒಪ್ಪಲು ಸಾಧ್ಯವಿಲ್ಲ.
ಮೀಸಲಾತಿ ಘೋಷಣೆ ವಿಚಾರವಾಗಿ ನಿರ್ಮಲಾನಂದನಾಥ ಶ್ರೀಗಳಿಗೆ ಹಾಗೂ ಬಸವಜಯ ಮೃತ್ಯುಂಜಯ ಶ್ರೀಗಳಿಗೆ 25 ಬಾರಿ ಕರೆ ಮಾಡಿ ಒಪ್ಪಿಕೊಳ್ಳಿ ಎಂದು ಒತ್ತಡ ಹಾಕಿದ್ದಾರೆ. ಸ್ವಾಮೀಜಿಗಳಿಗೆ ಫೋನ್ ಮಾಡಿ ಈ ರೀತಿ ಒಪ್ಪಿಕೊಳ್ಳಿ ಎಂದು ಒತ್ತಾಯಿಸುವುದು ಸರಿನಾ ? ಎಂದು ಕಿಡಿಕಾರಿದ್ದಾರೆ.
ಲಿಂಗಾಯಿತರು 16%, ಒಕ್ಕಲಿಗರು 12% ಮೀಸಲಾತಿ ಕೇಳಿದ್ದರು. ಅಲ್ಪಸಂಖ್ಯಾತದ ಮೀಸಲಾತಿ ಕಿತ್ತುಕೊಂಡು ಕೊಡುವುದೇನಿತ್ತು? ಅಧಿಕಾರ ದುರುಪಯೋಗ ಮಾಡಿಕೊಂಡು ಎಲ್ಲಾ ಜನರಿಗೂ ಮೋಸ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಮೀಸಲಾತಿಯನ್ನು 90 ದಿನಗಳಲ್ಲಿ 3 ಬಾರಿ ಬದಲಾಯಿಸಿದ್ದಾರೆ. ಈ ರೀತಿ ಬದಲಾವಣೆ ಮಾಡಲು ಇದೇನು ಆಸ್ತಿನಾ? ಸಂವಿಧಾನದ ಪ್ರಕಾರ ನಾವು ಮೀಸಲಾತಿ ಕೇಳಿದ್ದೇವೆ. ಈ ರೀತಿ ಕೊಡಲು ಒಕ್ಕಲಿಗರು, ಲಿಂಗಾಯಿತರು ಭಿಕ್ಷುಕರೇನ್ರಿ? ಯಾಕೆ ಅಲ್ಪಸಂಖ್ಯಾತರ ಮೀಸಲಾತಿ ಕಿತ್ತುಕೊಂಡು ಕೊಡಬೇಕು? ಬಿಜೆಪಿಯ ಅವೈಜ್ಞಾನಿಕ ತೀರ್ಮಾನವನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಕಿಡಿಕಾರಿದ್ದಾರೆ.