ಗದಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡದಿದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಪಂಚಮಸಾಲಿ ಸಮುದಾಯದ ಮಹಿಳಾ ಘಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಗದಗದಲ್ಲಿ ಮಾತನಾಡಿರುವ ಪಂಚಮಸಾಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕಾಶಪ್ಪನವರ್, ತಮ್ಮ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಗಡುವು ನೀಡಲಾಗಿತ್ತು. ಆದರೂ ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ. ಮೀಸಲಾತಿ ಕಲ್ಪಿಸಿಕೊಡಲು ರಾಜ್ಯ ಸರ್ಕಾರಕ್ಕೆ ಆಗಸ್ಟ್ 22ರ ಗಡುವು ನೀಡಲಾಗುವುದು. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಮೀಸಲಾತಿ ವಿಳಂಬ ಮಾಡಿದರೆ ಸರ್ಕಾರ ಕಠಿಣ ಪರಿಸ್ಥಿತಿ ಎದುರಿಸಬೇಕಾದೀತು. ಶ್ರಾವಣ ಮಾಸದಲ್ಲಿ ಮಹಿಳಾ ಘಟಕದ ವತಿಯಿಂದ ಜಿಲ್ಲೆ ಜಿಲ್ಲೆಯಲ್ಲಿ ಉಡಿ ತುಂಬುವ ಕಾರ್ಯಕ್ರಮ ಮಾಡುವ ಮೂಲಕ ಪಂಚಮಸಾಲಿ ಮಹಿಳಾ ಸಂಘಟನೆ ಮಾಡಲಾಗುವುದು. ಮೀಸಲಾತಿ ನೀಡದಿದ್ದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರು ಮತದಾನವನ್ನೇ ಬಹಿಷ್ಕರಿಸಲಿದ್ದಾರೆ ಎಂದು ಎಚ್ಚರಿಸಿದರು.