ಬೆಳಗಾವಿ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಆರಂಭವಾಗಿದ್ದು, ಬೆಳಗಾವಿಯ ಸುವರ್ಣ ವಿಧಾನಸೌಧದತ್ತ ಧಾವಿಸಿ ಬರುತ್ತಿದ್ದಾರೆ.
ಬೈಲಹೊಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ ಇದ್ದಂತಿಲ್ಲ. ಯಾವ ಮುಖ್ಯಮಂತ್ರಿಗಳೂ ನಾವು ಇಷ್ಟೊಂದು ಕೇಳಿಕೊಂಡಿರಲಿಲ್ಲ. ಸಿಎಂ ಬೊಮ್ಮಾಯಿಯವರು ಮಾತಿಗೆ ತಪ್ಪುತ್ತಿದ್ದಂತೆ ಭಾಸವಾಗುತ್ತಿದೆ. ಮುಖ್ಯಮಂತ್ರಿಗಳು ನಮ್ಮ ಭಾವನೆಗೆ ಸ್ಪಂದಿಸಬೇಕಿತ್ತು. ಆದರೂ ನಾಳೆಯವರೆಗೆ ಕಾಯುತ್ತೇವೆ . ನಾಳೆಯೊಳಗಾಗಿ ಮೀಸಲಾತಿ ಘೋಷಿಸಿದರೆ ಸಂಭ್ರಮಾಚರಣೆ ಇಲ್ಲವಾದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.
ನಾಳೆ ಸುವರ್ಣವಿಧಾನಸೌಧ ತಲುಪುವ ಮೊದಲು ಬೃಹತ್ ಸಮಾವೇಶ ನಡೆಸುತ್ತೇವೆ. ಅಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಅಷ್ಟರಲ್ಲಿ ಮುಖ್ಯಮಂತ್ರಿಗಳು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಿಸಿದರೆ ವಿಜಯೋತ್ಸವ ಆಚರಿಸುತ್ತೇವೆ. ಇಲ್ಲವಾದಲ್ಲಿ ಅಲ್ಲಿಂದಲೇ ಪಾದಯಾತ್ರೆ ಮೂಲಕ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತೇವೆ ಎಂದು ಹೇಳಿದ್ದಾರೆ.