ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಚುನಾವಣಾ ಕಣ ಈಗಾಗಲೇ ರಂಗೇರಿದೆ. ನಾಮಪತ್ರ ಭರಾಟೆಯೂ ಜೋರಾಗಿದ್ದು, ನಾಮಪತ್ರ ಸಲ್ಲಿಕೆಗೆ ನಾಳೆ ಅಂತಿಮ ದಿನವಾಗಿದೆ. ಇದರ ಮಧ್ಯೆ ಮಾನ್ಯತೆ ಇಲ್ಲದ ಪಕ್ಷಗಳಿಗೆ ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಸಿಹಿ ಸುದ್ದಿ ನೀಡಿದೆ.
ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು ಕೂಡಾ ತನ್ನ ಚುನಾವಣಾ ಪ್ರಚಾರಕ್ಕಾಗಿ ಖಾಸಗಿ ವಾಹನಗಳು ಹಾಗೂ ಮೈಕ್ ಬಳಸಬಹುದು ಎಂದು ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ತನ್ನ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ, ಸಿ.ಎನ್. ದೀಪಕ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ಮಧ್ಯಂತರ ಆದೇಶ ಹೊರ ಬಿದ್ದಿದೆ. ಅವರ ಪಕ್ಷ ಮಾನ್ಯತೆ ಪಡೆದಿಲ್ಲ ಎಂಬ ಕಾರಣಕ್ಕೆ ಖಾಸಗಿ ವಾಹನ ಮತ್ತು ಧ್ವನಿವರ್ಧಕ ಬಳಕೆಗೆ ನಿರಾಕರಿಸಲಾಗಿದ್ದು, ಇದನ್ನು ದೀಪಕ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.