ಮಂಡ್ಯ: ಭಾರತ್ ಜೋಡೋ ಯಾತ್ರೆ ವೇಳೆ ಮಾಧ್ಯಮ ಸಿಬ್ಬಂದಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಕ್ರಾಸ್ ಬಳಿ ಈ ಘಟನೆ ನಡೆದಿದೆ.
ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಸೆಕ್ಯುರಿಟಿ ಹೆಸರಲ್ಲಿ ಪೊಲೀಸ್ ಸಿಬ್ಬಂದಿಗಳು ಮಾಧ್ಯಮ ಸಿಬ್ಬಂದಿಗಳ ಮೇಲೆ ದುಂಡಾವರ್ತನೆ ನಡೆಸಿದ್ದಾರೆ. ಅಲ್ಲದೇ ಹಲ್ಲೆ ನಡೆಸಿ ಕತ್ತಿನ ಪಟ್ಟಿ ಹಿಡಿದು ಎಳೆದಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜಕ್ಕನಹಳ್ಳಿ ಕ್ರಾಸ್ ಬಳಿ ಭಾರತ್ ಜೋಡೊ ಪಾದಯಾತ್ರೆ ವೇಳೆ ಮಾಧ್ಯಮ ಪ್ರತಿನಿಧಿಗಳು ಹಾಗೂ ಪೊಲೀಸರ ನಡುವೆ ಕೆಲ ಕಾಲ ನೂಕಾಟ, ತಳ್ಳಾಟ ನಡೆದಿದೆ. ಪೊಲೀಸರು ಮಾಧ್ಯಮ ಸಿಬ್ಬಂದಿಗಳ ಮೇಲೆ ದುಂಡಾವರ್ತನೆ ನಡೆಸುತ್ತಿದ್ದರೂ ಅದನ್ನು ಬಿಡಿಸಲು ಯತ್ನಿಸದೇ ಮಂಡ್ಯ ಎಸ್ ಪಿ ಯತೀಶ್ ಮೌನವಾಗಿ ನಿಂತಿದ್ದರು. ಎಸ್ ಪಿ ನಡೆಗೆ ಮಾಧ್ಯಮ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಸಿಬ್ಬಂದಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಲ್ಲೆ ಘಟನೆಯನ್ನು ಖಂಡಿಸುತ್ತೇನೆ. ಪೊಲೀಸರ ಬದಲು ನಾನು ಕ್ಷಮೆ ಕೋರುತ್ತೇನೆ. ಹಲ್ಲೆ ನಡೆಸಿದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ ಪಿ ಗೆ ಸೂಚಿಸುವುದಾಗಿ ತಿಳಿಸಿದ್ದಾರೆ.