ಬೆಳಗಾವಿ: 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯ ಮತ್ತೆ ಪಾದಯಾತ್ರೆ ಹೋರಾಟ ಆರಂಭಿಸಿದೆ. ರಾಜ್ಯ ಸರ್ಕಾರ ಕೊಟ್ಟ ಮಾತು ತಪ್ಪಿದ ಹಿನ್ನೆಲೆಯಲ್ಲಿ ಮತ್ತೆ ಪಾದಯಾತ್ರೆ ಆರಂಭಿಸಿದ್ದೇವೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಬೆಳಗಾವಿಯ ಸವದತ್ತಿಯಿಂದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಆರಂಭಿಸಿರುವ ಪಂಚಮಸಾಲಿ ಸಮುದಾಯದ ಮುಖಂಡರು ಸುವರ್ಣ ವಿಧಾನಸೌಧ ತಲುಪುವುದರೊಳಗಾಗಿ ಮೀಸಲಾತಿ ಘೋಷಣೆ ಮಾಡಿ ಇಲ್ಲವಾದಲ್ಲಿ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಈ ವೇಳೆ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮೀಸಲಾತಿ ಘೋಷಿಸುವ ಮಾತು ಕೊಟ್ಟಿದ್ದರು. ಆದರೆ ಈಗ ನಾನು ಮಾತುಕೊಟ್ಟಿಲ್ಲ ಎಂದು ಹೇಳಿದ್ದಾರೆ. ಸಿಎಂ ಮಾತು ಕೊಟ್ಟಿದ್ದು ನಿಜ. ಈಗ ಮಾತಿಗೆ ತಪ್ಪಿರುವುದು ಬೇಸರವಾಗಿದೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪನವರು ಫೆಬ್ರವರಿಯಲ್ಲಿ 2ಎ ಮೀಸಲಾತಿ ಶಿಫಾರಸು ಮಾಡಿದ್ದರು. ಅವರು ಶಿಫಾರಸು ಮಾಡಿ 1 ವರ್ಷ 8 ತಿಂಗಳು ಕಳೆದಿದೆ. ಸರ್ಕಾರ ಮನಸ್ಸು ಮಾಡಿದರೆ 24 ಗಂಟೆಯಲ್ಲಿ ವರದಿ ತರಿಸಿಕೊಳ್ಳಬಹುದು. ಆದರೆ ನೆಪ ಹೇಳುತ್ತಾ ಮೀನಾಮೇಷ ಎಣಿಸುತ್ತಿದ್ದಾರೆ. ಸರ್ಕಾರ ಮಾತು ತಪ್ಪಿದ್ದಕ್ಕೆ ಮತ್ತೆ ನಾವು ಪಾದಯಾತ್ರೆ ಆರಂಭಿಸಿದ್ದೇವೆ. ಡಿ.22ರಂದು ಪಾದಯಾತ್ರೆ ಕಿತ್ತೂರು ತಲುಪಲಿದೆ. ಅಲ್ಲಿಂದ ಸುವರ್ಣಸೌಧಕ್ಕೆ ಎಂಟ್ರಿ ಕೊಡುವುದರೊಳಗಾಗಿ ಮೀಸಲಾತಿ ಘೋಷಿಸಿ. ಇಲ್ಲವಾದಲ್ಲಿ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.