ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನ ಗೆಲ್ಲಲಿದೆ ಎಂಬ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ವ್ಯಂಗ್ಯವಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉಳಿದ ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಲಿ, ಅದನ್ನೇ ಪಂಚಾಮೃತ ಎಂದುಕೊಳ್ಳುತ್ತೇವೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅವರಿಗೆ ಎಷ್ಟು ಸ್ಥಾನ ಬೇಕು ಅಷ್ಟು ಇಟ್ಟುಕೊಳ್ಳಲಿ, ಪರಿಷತ್ ನಲ್ಲಿ ಉಳಿದ ಸ್ಥಾನಗಳನ್ನು ನಮಗೆ ಬಿಟ್ಟುಕೊಡಲಿ, ಅದನ್ನೇ ಪಂಚಾಮೃತ ಎಂದು ಭಾವಿಸುತ್ತೇವೆ ಎಂದು ಹೇಳಿದರು.
ಅಧಿವೇಶನದಲ್ಲಿ ಮತಾಂತರ ಕಾಯ್ದೆ ಜಾರಿ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿಯವರು ಎರಡು ಪ್ಲಾನ್ ಮಾಡಿದ್ದಾರೆ. ಒಂದು ಅಧಿಕೃತವಾಗಿ ಕಾಯ್ದೆ ಜಾರಿ ಮಾಡುವುದು. ಮತ್ತೊಂದು ಖಾಸಗಿಯಾಗಿ ಮಸೂದೆ ಮಂಡನೆ ಮಾಡುವುದು. ಈ ಮೂಲಕ ಮತಾಂತರ ಕಾಯ್ದೆ ಪಾಸ್ ಮಾಡಲು ಮುಂದಾಗಿದ್ದಾರೆ. ಇದು ರಾಜಕೀಯವಾಗಿ ಪ್ರಭಾವ ಬೀರಲಿದೆ. ಇದು ಕೇವಲ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ, ಒಂದೊಂದು ಸಮುದಾಯ ಟಾರ್ಗೆಟ್ ಮಾಡಿ ಹಿಂಸೆ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.