ಬೆಳಗಾವಿ: ಅಕ್ಕಿ ಕೊಡದಿದ್ದರೆ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಲಿದೆ ಎಂದಿದ್ದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೊದಲು ಜನರ ಖಾತೆಗೆ 15 ಲಕ್ಷ ರೂಪಾಯಿ ಹಾಕಲು ಹೇಳಿ ಎಂದು ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜುಲೈ 1ರಿಂದ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಉಚಿತ ಅಕ್ಕಿ ನೀಡದಿದ್ದರೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ನೀಡಿರುವ ಎಚ್ಚರಿಕೆಗೆ ಪ್ರತಿಕ್ರಿಯಿಸಿ, ಮೊದಲು ಅವರಿಗೆ ಜನರ ಖಾತೆಗೆ 15 ಲಕ್ಷ ಹಾಕಲು ಹೇಳಿ. ಒಂದು ವರ್ಷಕ್ಕೆ 2 ಲಕ್ಷ ಉದ್ಯೋಗ ಕೊಡಲು ಹೇಳಿ ಆಮೇಲೆ ಪ್ರತಿಭಟನೆ ಮಾಡಲಿ ಎಂದು ಟಾಂಗ್ ನೀಡಿದರು.
ನಾವು ಮಾತು ಕೊಟ್ಟಿದ್ದೇವೆ. ಉಚಿತ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಹೇಳಿದರು. ಇದೇ ವೇಳೆ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ವಿಳಂಬವಾಗಿ ಮಾತನಾಡಿದ ಅವರು, ಸಿಬ್ಬಂದಿ ಕೊರತೆಯಿಂದ ಗೃಹಲಕ್ಷ್ಮಿ ಜಾರಿ ವಿಳಂಬವಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಣ ಇಲಾಖೆಯಲ್ಲಿ ಯಾವ ಗೊಂದಲಗಳೂ ಇಲ್ಲ. ಪ್ರತಿದಿನ ಗೃಹಲಕ್ಷ್ಮೀ ಯೋಜನೆ ಬಗ್ಗೆ ಹೇಳುವುದು ಒಳ್ಳೆಯದಲ್ಲ. ಎಲ್ಲಾ ಗೊಂದಲ ಬಗೆಹರಿದ ಮೇಲೆ ಸುದ್ದಿಗೋಷ್ಠಿ ಮಾಡಿ ತಿಳಿಸುತ್ತೇನೆ ಎಂದು ಹೇಳಿದರು.