ಬೆಂಗಳೂರು: ಆರ್ ಎಸ್ ಎಸ್ ಸಿಎಂ ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಎಂದು ವ್ಯಂಗ್ಯವಾಡಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಹೆಚ್.ಡಿ.ಕೆ ಅವರ ಆಧಾರ ರಹಿತ ಆರೋಪಗಳಿಗೆ ನಾನು ಉತ್ತರಿಸಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೆಲವರ ಹೇಳಿಕೆಗಳಿಂದ ಯಾವುದೇ ಸಮಸ್ಯೆ ಉದ್ಭವವಾಗಲ್ಲ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇನ್ನಷ್ಟು ಉತ್ತಮ ಆಡಳಿತ ನೀಡುವ ವಿಶ್ವಾಸ ನನಗಿದೆ. ಕುಮಾರಸ್ವಾಮಿ ಅವರ ಆಧಾರರಹಿತ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದರು.
ಪಠ್ಯ ಪುಸ್ತಕದಲ್ಲಿ ವರದಕ್ಷಿಣೆ ಪ್ರಯೋಜನಗಳ ಪಟ್ಟಿ ; ರೊಚ್ಚಿಗೆದ್ದ ಟ್ವೀಟಿಗರು
ಇಂದಿನಿಂದ ಎರಡು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದು, ಕೇಂದ್ರದ ಸಚಿವರುಗಳನ್ನು ಭೇಟಿಯಾಗಿ ಹಲವು ವಿಚಾರಗಳನ್ನು ಚರ್ಚಿಸುತ್ತೇನೆ. ಇಂದು ಸಂಜೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಲಿದ್ದು, ಮೇಕೆದಾಟು, ಮಹದಾಯಿ, ಕೃಷ್ಣ, ಭದ್ರಾ ಮೇಲ್ದಡೆ ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳ ಕುರಿತು ಚರ್ಚಿಸುವುದಾಗಿ ತಿಳಿಸಿದರು.
ಬಳಿಕ ಕೇಂದ್ರ ಆರೋಗ್ಯ ಸಚಿವ, ಕಲ್ಲಿದ್ದಲು ಸಚಿವರ ಭೇಟಿಗೂ ಸಮಯ ನಿಗದಿಯಾಗಿದೆ. ರಾಜ್ಯದಲ್ಲಿ ಸೈನಿಕ ಶಾಲೆ ಆರಂಭದ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜತೆಯೂ ಮಾತನಾಡುತ್ತೇನೆ. ಅವಕಾಶ ಸಿಕ್ಕರೆ ವರಿಷ್ಠರನ್ನು ಭೇಟಿಯಾಗುತ್ತೇನೆ. ಈವರೆಗೆ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ, ಸಮಯಾವಕಾಶ ಸಿಕ್ಕರೆ ಜೆ.ಪಿ.ನಡ್ಡಾ ಹಾಗೂ ಅಮಿತ್ ಶಾ ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಹೇಳಿದರು.