ಬೆಂಗಳೂರು; ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೆ ಕಿಡಿಕಾರಿರುವ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ರಮೇಶ್ ಜಾರಕಿಹೊಳಿ ಸರ್ಕಾರದ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಣ್, ರಮೇಶ್ ಜಾರಕಿಹೊಳಿ 819 ಕೋಟಿ ಲೂಟಿ ಮಾಡಿದ್ದಾರೆ. ಅಮಿತ್ ಶಾ, ಫಡ್ನವಿಸ್, ರಾಜ್ಯದ ಮಾಜಿ ಸಿಎಂ ಕೂಡ ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ. ಸರ್ಕಾರದ ಹಣವನ್ನೇ ಲೂಟಿ ಮಾಡಿದರೂ ಕೂಡ ರಮೇಶ್ ಜಾರಕಿಹೊಳಿಗೆ ಈವರೆಗೆ ಒಂದೇ ಒಂದು ನೋಟೀಸ್ ಜಾರಿ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
578 ಕೋಟಿ ರೂಪಾಯಿ ಸಾಲವನ್ನು ರಮೇಶ್ ಜಾರಕಿಹೊಳಿ ವಿವಿಧ ಬ್ಯಾಂಕ್ ಗಳಿಂದ ಪಡೆದಿದ್ದಾರೆ. ಇವರದ್ದೇ ಸೌಭಾಗ್ಯ ಲಕ್ಷ್ಮಿ ಶುಗರ್ ಲಿಮಿಟೆಡ್ ವತಿಂದ ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದಾರೆ. ಇನ್ನೂ ಮರು ಪಾವತಿ ಮಾಡಿಲ್ಲ. ಅಭಿನಂದನ್ ಪಾಟೀಲ್ ರಮೇಶ್ ಜಾರಕಿಹೊಳಿ ಬೇನಾಮಿ. ಇವರ ಅರಿಹಂತ್ ಸೊಸೈಟಿಯಿಂದ 48 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. 156 ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟದೆ ರಮೇಶ್ ಬಾಕಿ ಉಳಿಸಿಕೊಂಡಿದ್ದಾರೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.
2019ರಲ್ಲಿ ರಮೇಶ್ ಕಂಪನಿಗೆ ಅಪೆಕ್ಸ್ ಬ್ಯಾಂಕ್ ನೋಟೀಸ್ ಕಳುಹಿಸಿದ್ದಕ್ಕೆ ಧಾರವಾಡ ಪೀಠದಲ್ಲಿ ಪ್ರಶ್ನೆ ಮಾಡಿದ್ದಾರೆ. ಕೋರ್ಟ್ 6 ವಾರಗಳಲ್ಲಿ ಸಾಲ ತೀರಿಸಬೇಕು ಎಂದು ಆದೇಶ ನೀಡಿತ್ತು. ಆದರೂ ಸಾಲ ಮರುಪಾವತಿ ಮಾಡಿಲ್ಲ. ಬ್ಯಾಂಕ್ ಗಳಿಗೆ ವಂಚನೆ ಎಸಗಿದ್ದಾರೆ. ಸೌಭಾಗ್ಯ ಶುಗರ್ ಕಂಪನಿಯಿಂದ 2021ರಲ್ಲಿ 60 ಕೋಟಿ ಸಂಪಾದಿಸಿ ಬೋರ್ಡ್ ಮೆಂಬರ್ ಗಳಾಗಿರುವ 6 ಜನರ ಖಾತೆಗೆ ಹಣ ವರ್ಗಾವಣೆಯಾಗಿದೆ. ಕಂಪನಿ ಬೋರ್ಡ್ ನಲ್ಲಿ ರಮೇಶ್, ಅವರ ಮಗ, ಮಗಳು ಕೂಡ ಇದ್ದಾರೆ. ಇವರಿಗೂ ಪಾಲು ಕೊಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಮೇಶ್ ಜಾರಕಿಹೊಳಿ ಅಕ್ರಮದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಣುತ್ತಿಲ್ಲವೇ? ಇಡಿ ಏನು ಮಾಡುತ್ತಿದೆ? ರಮೇಶ್ ಜಾರಕಿಹೊಳಿ ವಂಚನೆ ವಿರುದ್ಧ ನಾನು ಬೆಂಗಳೂರಿನ ಇಡಿ ಕಚೇರಿಯಲ್ಲಿ ದೂರು ನೀಡುತ್ತಿದ್ದೇನೆ. ಹೈಕೋರ್ಟ್ ನಲ್ಲಿಯೂ ಪೆಟಿಷನ್ ಹಾಕುತ್ತೇನೆ ಎಂದು ಹೇಳಿದರು.