ಮಂಡ್ಯ: ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ, ಜೆಡಿಎಸ್ ಮಹಿಳಾ ಕಾರ್ಯಕರ್ತೆ ಜತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಭಾರಿ ವೈರಲ್ ಆಗಿದ್ದು, ಲೋಕಸಭಾ ಉಪ ಚುನಾವಣೆಯಲ್ಲಿ 30 ಕೋಟಿ ಹಣ ಖರ್ಚು ಮಾಡಿದ್ದಾಗಿ ಹೇಳಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ನಾಗಮಂಗಲ ಕ್ಷೇತ್ರದ ಕೊಪ್ಪಗೆ ಭೇಟಿ ನೀಡಿದ್ದ ಶಿವರಾಮೇಗೌಡ, ಅಲ್ಲಿ ನಡೆಯುವ ಸಭೆಗೆ ಮಹಿಳಾ ಕಾರ್ಯಕರ್ತೆಗೆ ಆಹ್ವಾನ ನೀಡಲು ಕರೆ ಮಾಡಿದ್ದಾರೆ. ಈ ವೇಳೆ ನನ್ನದು 8 ಸ್ಕೂಲ್ ಇದೆ. ತಿಂಗಳಿಗೆ 3 ಕೋಟಿ ಸಂಬಳ ಕೊಡುತ್ತೇನೆ. ಮುಂದಿನ ನಾಗಮಂಗಲ ವಿಧಾನಸಭಾ ಚುನಾವಣೆಗೆ 10 ತಿಂಗಳ ಸಂಬಳದಷ್ಟೇ ಹಣ ಬೇಕು. ಅಷ್ಟು ಹಣ ಖರ್ಚು ಮಾಡುತ್ತೇನೆ ನಮಗೆ ಬೆಂಬಲ ನೀಡಬೇಕು ಎಂದು ಹೇಳಿದ್ದಾರೆ.
ಎಂ ಎಲ್ ಸಿ ಚುನಾವಣೆಗೆ 27 ಕೋಟಿ ಖರ್ಚು ಮಾಡಿದ್ದೆ. ಎಂಪಿ ಚುನಾವಣೆಗೆ 5 ತಿಂಗಳಿಗೆ 30 ಕೋಟಿ ಖರ್ಚು ಮಾಡಿದ್ದೆ. ಈಗ 30 ಕೋಟಿ ಖರ್ಚು ಮಾಡುತ್ತಿದ್ದೇನೆ ಎಂದು ಮಹಿಳಾ ಕಾರ್ಯಕರ್ತೆ ಜತೆ ಮಾತನಾಡಿದ್ದಾರೆ. 37 ನಿಮಿಷ 54 ಸೆಕೆಂಡುಗಳ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೇ ವೇಳೆ ನಾಗಮಂಗಲದ ಶಾಸಕರ ವಿರುದ್ಧವೂ ಕಿಡಿ ಕಾರಿರುವ ಶಿವರಾಮೇಗೌಡ, ನಾನು ಎರಡು ಸಲ ಎಂ ಎಲ್ ಎ ಆಗಿದ್ದೇನೆ. ಆತ ಮಾಡಿದ ಕೆಲಸಕ್ಕಿಂತ ತಾತನಂತ ಕೆಲಸ ಮಾಡಬಹುದು. ಸುರೇಶ್ ಗೌಡ ನನಗೆ ಲೋಕಸಭೆ ಟಿಕೆಟ್ ತಪ್ಪಿಸಿದ್ದ. ನಿಖಿಲ್ ಕುಮಾರಸ್ವಾಮಿಯನ್ನು ಚುನಾವಣೆಗೆ ನಿಲ್ಲಿಸಿ ಅವರ ಮನೆಗೂ ಕಂಟಕ ತಂದರು, ನನಗೂ ಕಂಟಕ ತಂದರು, ಮುಂದಿನ ಬಾರಿ ಚುನಾವಣೆಗೆ ನಾನು ನಿಲ್ಲುತ್ತೇನೆ. ನನಗೆ ಬೆಂಬಲ ಕೊಡಬೇಕು ಎಂದು ಹೇಳಿದ್ದಾರೆ.