ಮೈಸೂರು: ಮಾಂಸಾಹಾರ ಸೇವಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ದೇವಸ್ಥಾನಕ್ಕೆ ತೆರಳಿದ್ದ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಬರಬೇಡಿ ಎಂದು ದೇವರು ಹೇಳಿದ್ದಾರಾ? ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ಭಕ್ತೆ ಅವರು ಸಹ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ. ಅವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಹುದು ಎಂದು ಹೇಳಿದರೆ ಬಂದು ಸಾರ್ವಜನಿಕವಾಗಿ ಹೇಳಿ ಆಗ ನಾವು ಒಪ್ಪುತ್ತೇವೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಪದೇ ಪದೇ ಇಂತಹ ತಪ್ಪು ಮಾಡುತ್ತಾರೆ. 2017ರಲ್ಲಿ ನಾಟಿಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟಿಸಿದರು. ಇದಕ್ಕೆ ನಾನೇ ಸಾಕ್ಷಿ ಇದ್ದೇನೆ. ಅದೇ ಕಾರಣಕ್ಕೆ ಅವರಿಗೆ ಮತ್ತೆ ಚಾಮುಂಡೇಶ್ವರಿ ತಾಯಿ ಆ ಅವಕಾಶ ನೀಡಲಿಲ್ಲ. ಈಗ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬಸವ ತತ್ವ ಅನುಯಾಯಿಗಳ ನಂಬಿಕೆ ಒಡೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.