ಬೆಂಗಳೂರು: ಮಾಂಸಾಹಾರ ಸೇವಿಸಿ ದೇವಾಲಯಕ್ಕೆ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ನಾನು ಅಂದು ಮಾಂಸಾಹಾರ ಸೇವಿಸಿದ್ದು ನಿಜ. ದೇವಸ್ಥಾನಕ್ಕೆ ಹೋಗಿದ್ದೆ. ಆದರೆ ಗರ್ಭಗುಡಿಯೊಳಗೆ ಹೋಗಿಲ್ಲ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಮಾಂಸಾಹಾರ ಸೇವಿಸಿದ್ದು ನಿಜ. ದೇವಸ್ಥಾನಕ್ಕೆ ಹೋಗಿಲ್ಲ, ಹೊರಗಿನಿಂದಲೇ ಕೈ ಮುಗಿದು ಬಂದಿದ್ದೇನೆ ಎಂದು ಹೇಳಿದ್ದ ಸಿ.ಟಿ.ರವಿ ಈಗ ದೇವಸ್ಥಾನಕ್ಕೆ ಹೋಗಿದ್ದೆ. ಆದರೆ ದೇವಸ್ಥಾನದ ಗರ್ಭಗುಡಿಗೆ ಹೋಗಿಲ್ಲ. ಎರಡು ದೇವಾಲಯಗಳ ನಡುವಿನ ಪ್ಯಾಸೇಜ್ ನಲ್ಲಿ ಓಡಾಡಿದ್ದೇನೆ. ಮಾಂಸಾಹಾರ ಸೇವಿಸಿದ್ದೇನೆ ಎಂಬುದು ನನಗೆ ಮರೆತು ಹೋಗಿತ್ತು. ಎದೆ ಬಗೆದು ತೋರಿಸಲು ನಾನು ಹನುಮಂತನಲ್ಲ ಎಂದಿದ್ದಾರೆ.
ದೇವಸ್ಥಾನದ ಕಟ್ಟಡ ನಿರ್ಮಾಣ ವಿಚಾರವಾಗಿ ಆವರಣಕ್ಕೆ ಭೇಟಿ ಕೊಟ್ಟಿದ್ದೆ. ದೇಗುಲದ ಭೇಟಿ ನನ್ನ ಉದ್ದೇಶವಾಗಿರಲಿಲ್ಲ. ಸಭೆ ಮುಗಿತು ಅಲ್ಲಿ ಹೋದಾಗ ಸ್ಥಳೀಯರ ಒತ್ತಾಯದ ಮೇರೆಗೆ ಹೋಗಿದ್ದೆ. ಅದು ಜನರಿಗಾಗಿ ಹೋಗಿದ್ದಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ. ಮಾಂಸಾಹಾರ ಸೇವಿಸಿ ತುಂಬಾ ಹೊತ್ತು ಆಗಿದ್ದರಿಂದ ನನ್ನ ತಲೆಯಲ್ಲಿ ನಾನ್ ವೆಜ್ ಸೇವಿಸಿದ್ದ ಬಗ್ಗೆ ಕಿಂಚಿತ್ತೂ ನೆನಪೂ ಇರಲಿಲ್ಲ. ನಾವು ಹೋದಾಗ ದೇವಸ್ಥಾನದ ಬಾಗಿಲು ಹಾಕಿಕೊಂಡಿತ್ತು. ಒಂದು ವೇಳೆ ಬಾಗಿಲು ಹಾಕದೇ ಇದ್ದಿದ್ದರೆ ನಾನು ಗುಡಿಯೊಳಗೆ ಹೋಗುತ್ತಿದ್ದೆ. ಅಚಾನಕ್ ಆಗಿ ಆಗಿದ್ದು ಅಷ್ಟೇ ಅದರಲ್ಲೇನಿದೆ ಎಂದು ತಿಳಿಸಿದ್ದಾರೆ.