ಬೆಂಗಳೂರು: ಶಾಸಕ ಅರವಿಂದ್ ಲಿಂಬಾವಳಿ ಮಹಿಳೆಯ ಮೇಲಿನ ದರ್ಪಕ್ಕೆ ಕಾಂಗ್ರೆಸ್ ಕಿಡಿಕಾರಿದ್ದು, ಶಾಸಕರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಆಗ್ರಹಿಸಿದೆ.
ರಾಜ್ಯ ಬಿಜೆಪಿಯ ಸ್ತ್ರೀಪರ ಕಾಳಜಿಯ ವೀರಾಧಿವೀರರೇ, ಸಿಡಿ ಶೂರರೇ, ಕೋರ್ಟಿನಿಂದ ತಡೆಯಾಜ್ಞೆ ತಂದ ಧೀರರೇ..ನಿಮ್ಮ ಪಕ್ಷದ ಅರವಿಂದ್ ಲಿಂಬಾವಳಿಯ ಮಹಿಳೆ ಮೇಲಿನ ದೌರ್ಜನ್ಯಕ್ಕೆ ರೊಚ್ಚಿಗೇಳುವುದು ಯಾವಾಗ? ಸ್ತ್ರೀ ಕುಲದ ಗೌರವವನ್ನು ಎತ್ತಿ ಹಿಡಿಯುವುದು ಯಾವಾಗ? ನಳೀನ್ ಕುಮಾರ್ ಕಟೀಲ್ ಅವರೇ, ಲಿಂಬಾವಳಿಯವರನ್ನು ಉಚ್ಛಾಟಿಸುವುದು ಯಾವಾಗ? ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಮಹಿಳೆಯ ಮೇಲೆ ದಬ್ಬಾಳಿಕೆ ಎಸಗಿದ್ದಲ್ಲದೆ “ನಾನೇನು ರೇಪ್ ಮಾಡಿದ್ನಾ” ಎಂದು ಉದ್ಧಟತನದಲ್ಲಿ ಕೇಳಿದ ಅರವಿಂದ್ ಲಿಂಬಾವಳಿ ಅವರ ಮಾತುಗಳು ಇಡೀ ಬಿಜೆಪಿ ಸಂಸ್ಕೃತಿಗೆ ಹಿಡಿದ ಕನ್ನಡಿ. ಲಿಂಬಾವಳಿಯ ಈ ಮಾತುಗಳು ಇಡೀ ಸ್ತ್ರೀ ಕುಲಕ್ಕೆ ಮಾಡಿದ ಘೋರ ಅವಮಾನ. ಇಂತಹ ಕೊಳಕು ಮನಸ್ಥಿತಿಯ ಶಾಸಕನ ವಿರುದ್ಧ ಕ್ರಮ ಕೈಗೊಳ್ಳದೆ ಸಿಎಂ ಮೌನ ವಹಿಸಿರುವುದು ಏಕೆ?
ತನ್ನದೇ ಮತ ಕ್ಷೇತ್ರದ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದರೂ ಶಾಸಕ ಅರವಿಂದ್ ಲಿಂಬಾವಳಿ ವಿರುದ್ಧ ಕ್ರಮ ಜರುಗಿಸದೆ ನಾಲಿಗೆ ಉದ್ಧವಾಗಲು ಬಿಟ್ಟ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಯೂರಿ ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು. ಬಿಜೆಪಿಗೆ ನಿಜಕ್ಕೂ ಮಹಿಳೆಯರ ಮೇಲೆ ಗೌರವ ಇದ್ದರೆ ಲಿಂಬಾವಳಿಯನ್ನು ವಜಾಗೊಳಿಸಿ ನಿರೂಪಿಸಲಿ ಎಂದು ಒತ್ತಾಯಿಸಿದೆ.
ಬಿಜೆಪಿ ರೇಪ್ ಆರೋಪಿ ರಮೇಶ್ ಜಾರಕಿಹೊಳಿಯನ್ನೇ ಸಮರ್ಥಿಸಿಕೊಂಡಿದೆ. ಮೈಸೂರಿನ ರೇಪ್ ಸಂತ್ರಸ್ತೆಯನ್ನು ದೂಷಿಸಿದೆ. ಗುಜರಾತಿನಲ್ಲಿ ರೇಪಿಸ್ಟರನ್ನು ಸನ್ಮಾನಿಸಿದೆ. ಕಾಶ್ಮೀರದಲ್ಲಿ ರೇಪ್ ಆರೋಪಿಗಳ ಮೆರವಣಿಗೆಯನ್ನೇ ಮಾಡಿದೆ. ಇಂತ ಮಹಿಳಾ ವಿರೋಧಿ ಬಿಜೆಪಿಗೆ ಲಿಂಬಾವಳಿ ಮಾತು ಪ್ರಿಯವಾಗಬಹುದು, ಆದರೆ ರಾಜ್ಯದ ಮಹಿಳೆಯರಿಗೆ ಅದು ಅಸಹ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.