ಮಹಾರಾಷ್ಟ್ರದಲ್ಲಿ ರಾಜಕೀಯದ ಹೈ ಡ್ರಾಮವೇ ನಡೆದಿದೆ. ಸಚಿವ ಏಕನಾಥ್ ಶಿಂಧೆ 30ಕ್ಕೂ ಅಧಿಕ ಶಾಸಕರೊಂದಿಗೆ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದು, ಇದರಿಂದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನದಂಚಿಗೆ ಬಂದು ನಿಂತಿದೆ.
ಏಕನಾಥ್ ಶಿಂಧೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆನ್ನಲಾಗಿದ್ದು, ಅದರಲ್ಲಿ ಪ್ರಮುಖವಾಗಿ ಹಾಲಿ ಮೈತ್ರಿಕೂಟವಾದ ಕಾಂಗ್ರೆಸ್ – NCP ಸಖ್ಯ ತೊರೆದು ಬಿಜೆಪಿ ಜೊತೆ ಸರ್ಕಾರ ರಚಿಸಬೇಕು ಎಂದು ಕೇಳಿದ್ದಾರೆನ್ನಲಾಗಿದೆ. ಜೊತೆಗೆ ಉದ್ಧವ್ ಠಾಕ್ರೆ ತಮ್ಮ ಪುತ್ರ ಆದಿತ್ಯ ಠಾಕ್ರೆ ಅವರಿಗೆ ಅತಿಯಾದ ಮನ್ನಣೆ ನೀಡುತ್ತಿರುವುದು ಸಚಿವರು, ಶಾಸಕರನ್ನು ಕೆರಳಿಸಿದೆ ಎನ್ನಲಾಗಿದೆ.
ಹೀಗಾಗಿಯೇ ಆದಿತ್ಯ ಠಾಕ್ರೆ ಬುಧವಾರದಂದು ತಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್ನಲ್ಲಿ ‘ಮಿನಿಸ್ಟರ್’ ಪದವನ್ನು ತೆಗೆದು, ಆ ಮೂಲಕ ತಾವು ಸಚಿವ ಸ್ಥಾನ ತೊರೆಯಲು ಸಿದ್ಧ ಎಂಬ ಪರೋಕ್ಷ ಇಂಗಿತವನ್ನು ವ್ಯಕ್ತಪಡಿಸಿದ್ದರು. ಉದ್ಧವ್ ಸಂಪುಟದಲ್ಲಿ ಸಚಿವರಾಗಿರುವ ಆದಿತ್ಯ ಠಾಕ್ರೆ, ಪ್ರಮುಖ ವಿಚಾರಗಳಲ್ಲಿ ಮೂಗು ತೂ ರಿಸುತ್ತಿರುವುದು ಸಚಿವ, ಶಾಸಕರಿಗೆ ಅಸಮಾಧಾನ ತಂದಿದೆ ಎನ್ನಲಾಗಿದೆ. ಇದೇ ಬಂಡಾಯದ ಮೂಲ ಎಂಬ ಮಾತುಗಳು ಕೇಳಿ ಬರುತ್ತಿದ್ದು ಯಾವ ರೀತಿ ಶಮನವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.