ಮಹಾರಾಷ್ಟ್ರ ರಾಜಕಾರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಂಪುಟ ಸಹೋದ್ಯೋಗಿ ಏಕನಾಥ ಶಿಂಧೆ 40 ಶಾಸಕರೊಂದಿಗೆ ಗೌಹಾತಿಗೆ ತೆರಳಿದ್ದು, ಯಾವುದೇ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿರುವ ತಮ್ಮ ಬೆಂಬಲವನ್ನು ಹಿಂಪಡೆದುಕೊಳ್ಳುವ ಸಾಧ್ಯತೆ ಇದೆ.
ಹೀಗಾಗಿ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆದಿದ್ದು, ಆಡಳಿತ ಪಕ್ಷಗಳಾದ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್.ಸಿ.ಪಿ. ತಮ್ಮ ತಮ್ಮ ಶಾಸಕರುಗಳನ್ನು ಹಿಡಿದಿಟ್ಟುಕೊಳ್ಳಲು ತಂತ್ರಗಾರಿಕೆ ಹೆಣೆಯುತ್ತಿವೆ. ಕಾಂಗ್ರೆಸ್ ತುರ್ತು ಶಾಸಕಾಂಗ ಸಭೆ ಕರೆದಿದ್ದು, ಎಲ್ಲ ಶಾಸಕರು ತಪ್ಪದೇ ಹಾಜರಾಗಬೇಕೆಂದು ಫರ್ಮಾನು ಹೊರಡಿಸಿದೆ.
ಇದರ ಮಧ್ಯೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ತಾವು ಕೋವಿಡ್ ಸೋಂಕಿಗೆ ತುತ್ತಾಗಿರುವ ಕಾರಣ ಎನ್ ಎಚ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿರುವುದಾಗಿ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೂ ಕೊರೊನಾ ಸೋಂಕು ತಗುಲಿದೆ ಎನ್ನಲಾಗಿದ್ದು, ಹೀಗಾಗಿ ಇಂದು ಸಂಜೆ ನಡೆಯಲಿರುವ ತುರ್ತು ಸಚಿವ ಸಂಪುಟ ಸಭೆಗೆ ಅವರು ಆನ್ಲೈನ್ ಮೂಲಕ ಹಾಜರಾಗುವ ಸಾಧ್ಯತೆ ಇದೆ.