ಬೆಳಗಾವಿ: ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅಧಿವೇಶಕ್ಕೆ ವಿರುದ್ಧವಾಗಿ ಎಂಇಎಸ್ ಮಹಾಮೇಳಾವ್ ಆಯೋಜಿಸಿದ್ದು, ಮಹಾರಾಷ್ಟ್ರ ಸಂಸದ ಧೈರ್ಯಶೀಲ್ ಮಾನೆಗೆ ಆಹ್ವಾನ ನೀಡಿತ್ತು. ಆದರೆ ಮಹಾ ಸಂಸದರಿಗೆ ಬೆಳಗಾವಿ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಾಳೆ ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿ ನಡೆಯಲಿದ್ದ ಎಂಇಎಸ್ ಮಹಾಮೇಳಾವ್ ಸಮಾವೇಶದಲ್ಲಿ ಮಹಾರಾಷ್ಟ್ರ ಸಂಸದ ಧೈರ್ಯಶೀಲ್ ಮಾನೆ ಭಾಗಿಯಾಗಿ ಭಾಷಣ ಮಾಡುವವರಿದ್ದರು. ಈ ನಿಟ್ಟಿನಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಬೆಳಗಾವಿಯಲ್ಲಿ ನಾಳೆಯಿಂದ ನಡೆಯಲಿರುವ ಅಧಿವೇಶನ ಹಾಗೂ ಎಂಇಎಸ್ ಮಹಾಮೇಳಾವ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಂಸದರು ಬೆಳಗಾವಿಗೆ ಆಗಮಿಸಿದರೆ ಕಾನೂನು ಸುವ್ಯವಸ್ಥೆಗೆ, ಸಾರ್ವಜನಿಕರ ನೆಮ್ಮದಿಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಮುಂಜಾಗೃತಾ ಕ್ರಮವಾಗಿ ಸಂಸದರ ಭೇಟಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.