ಮುಂಬೈ: ಮಹಾರಾಷ್ಟ್ರ ಮಹಾ ಮೈತ್ರಿ ಸರ್ಕಾರದಲ್ಲಿ ಆಂತರಿಕ ಕಲಹ ಹೆಚ್ಚುತ್ತಿದ್ದು, ಬಂಡಾಯ ಶಾಸಕರ ಸಂಖ್ಯೆಯೂ ಏರುತ್ತಲೇ ಇದೆ. ಈ ನಡುವೆ ಪರಿಸ್ಥಿತಿ ಲಾಭ ಪಡೆಯುತ್ತಿರುವ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ನಡೆಸಿದೆ.
ಮಹಾ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಸಚಿವ ಏಕನಾಥ್ ಶಿಂಧೆ ಬಣಕ್ಕೆ ನಾಲ್ವರು ಪಕ್ಷೇತರ ಶಾಸಕರು ಬೆಂಬಲ ನೀಡಿದ್ದು, ಶಿಂಧೆ ಬಣದ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಈ ನಡುವೆ ಬಿಜೆಪಿ ಸರ್ಕಾರ ರಚನೆಗೆ ಮುಂದಾಗುತ್ತಿದ್ದು, ಏಕನಾಥ್ ಶಿಂಧೆ ಬಣದ ಜತೆ ಬಿಜೆಪಿ ಹೈಕಮಾಂಡ್ ಸಂಪರ್ಕದಲ್ಲಿದೆ.
ಮತ್ತೊಂದೆಡೆ ಬಿಜೆಪಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ನಿವಾಸದಲ್ಲಿ ಬಿಜೆಪಿ ನಾಯಕರು ಮಹತ್ವದ ಸಭೆ ನಡೆಸಲಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಒಂದು ವೇಳೆ ಠಾಕ್ರೆ ಸರ್ಕಾರ ವಿಶ್ವಾಸಮತ ಯಾಚಿಸಿದಲ್ಲಿ ಬಂಡಾಯವೆದ್ದಿರುವ ಶಿವಸೇನೆ ಶಾಸಕರು ಅಗತ್ಯವಿದ್ದರೆ ರಾಜ್ಯಪಾಲರ ಮುಂದೆ ಪರೇಡ್ ನಡೆಸಲು ಸಿದ್ಧತೆ ನಡೆಸಿದ್ದಾರೆ ಇಲ್ಲವೇ ನೇರವಾಗಿ ಬಂದು ಬಿಜೆಪಿ ಪರ ಮತ ಚಲಾವಣೆ ಮಾಡಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.