ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರ ತಾರಕ್ಕೇರಿರುವ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ತೆರಳಲಿದ್ದು, ಗಡಿ ವಿಚಾರವಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಗಡಿ ವಿಚಾರ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದಿದ್ದಾರೆ. ಹಾಗಾಗಿ ಎಲ್ಲಾ ಸಿದ್ಧತೆಗಳೊಂದಿಗೆ ಸಂಜೆ ದೆಹಲಿಗೆ ತೆರಳುತ್ತಿದ್ದೇನೆ. ಗಡಿ ವಿಚಾರವಾಗಿ ನಮ್ಮ ನಿಲುವೇನು? ಸಂವಿಧಾನಿಕವಾಗಿ, ಕಾನೂನಾತ್ಮಕವಾಗಿ ಇರುವ ಸ್ಪಷ್ಟತೆಗಳೇನು? ಎಲ್ಲವನ್ನೂ ಮನವರಿಕೆ ಮಾಡಿಕೊಡುತ್ತೇನೆ ಎಂದರು.
ಮಹಾರಾಷ್ಟ್ರಕ್ಕೆ ಕಳೆದ 6 ದಶಕಗಳಿಂದ ಗಡಿ ವಿವಾದ ರಾಜಕೀಯ ವಸ್ತುವಾಗಿದೆ. ರಾಜಕೀಯಕ್ಕಾಗಿ ಅದು ಗಡಿ ವಿಚಾರವನ್ನು ಬಳಸಿಕೊಳ್ಳುತ್ತಿದೆ. ಆದರೆ ನಮಗೆ ಹಾಗಲ್ಲ. ನಮಗೆ ಜನರ ರಕ್ಷಣೆ, ನೆಲ, ಜಲ, ಭಾಷೆ ವಿಚಾರ. ನಾವು ರಾಜ್ಯದ ಜನ, ಗಡಿ, ಭಾಷೆ ರಕ್ಷಣೆಗೆ ಬದ್ಧರಾಗಿದ್ದೇವೆ ಎಂದು ಹೇಳಿದರು.
ಇನ್ನು ಸಂಪುಟ ವಿಸ್ತರಣೆ ನಿಟ್ಟಿನಲ್ಲಿಯೂ ಸಿದ್ಧತೆಗಳೊಂದಿಗೆ ತೆರಳುತ್ತಿದ್ದೇನೆ. ಸಂದರ್ಭ ಬಂದರೆ ಈ ಬಗ್ಗೆಯೂ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.