ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನತೆ ತತ್ತರಿಸಿ ಹೋಗಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಮೊಣಕಾಲು ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಮಾಡುವುದೇ ದುಸ್ತರವಾಗಿದೆ.
ಇದರ ಜೊತೆಗೆ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಇದರ ಪರಿಣಾಮವಾಗಿ ಜನತೆ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳು, ಆಹಾರ ಪದಾರ್ಥಗಳು ಮಳೆಯಿಂದಾಗಿ ಹಾಳಾಗಿದ್ದು, ಊಟಕ್ಕೂ ಪರದಾಡುವಂತಾಗಿದೆ.
ಜೊತೆಗೆ ಮನೆಗಳ ಸುತ್ತಮುತ್ತ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿರುವ ಕಾರಣ ಹಾಲು, ತರಕಾರಿ ಮೊದಲಾದ ಅಗತ್ಯ ದೈನಂದಿನ ವಸ್ತುಗಳನ್ನು ಸಹ ತರಲು ಅಡಚಣೆಯಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ಕಾರು ಮುಳುಗುವಷ್ಟು ನೀರು ಇರುವ ಕಾರಣ ವಾಹನಗಳನ್ನು ಹೊರ ತೆಗೆಯಲು ಸಹ ಆಗುತ್ತಿಲ್ಲ.
ಇಂತಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ಜನತೆ ನೆರವಿಗೆ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಮುಂದಾಗಿದ್ದು, ಅಗತ್ಯವಿರುವವರಿಗೆ ಕಡಿಮೆ ದರದಲ್ಲಿ ಹೋಟೆಲ್ ರೂಮ್ ನೀಡಲು ನಿರ್ಧರಿಸಲಾಗಿದೆ.
ಈ ಕುರಿತಂತೆ ಮಾತನಾಡಿರುವ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್, ಅಗತ್ಯವಿರುವವರಿಗೆ ತಾತ್ಕಾಲಿಕವಾಗಿ ಕಡಿಮೆ ದರದಲ್ಲಿ ರೂಮುಗಳನ್ನು ಬಾಡಿಗೆಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕುಡಿಯುವ ನೀರಿಗೂ ಸಹ ಬಹಳಷ್ಟು ಕಡೆ ತೊಂದರೆಯಾಗಿದ್ದು, ಹೀಗಾಗಿ ಸಂಕಷ್ಟಕ್ಕೀಡಾದವರು ಸಂಘವನ್ನು ಸಂಪರ್ಕಿಸಿದರೆ ಕಡಿಮೆ ದರದಲ್ಲಿ ಹೋಟೆಲ್ ರೂಮ್ ಗಳನ್ನು ಬಾಡಿಗೆಗೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.