ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿದ್ದು, ಮಳೆಯ ಅಬ್ಬರದ ನಡುವೆ ವಾಹನ ಸವಾರರು ಜೀವ ಪಣಕ್ಕಿಟ್ಟು ಓಡಾಡ ಬೇಕಾದ ಸ್ಥಿತಿ ಎದುರಾಗಿದೆ.
ರಸ್ತೆ ಗುಂಡಿ ಸಮರ್ಪಕವಾಗಿ ಮುಚ್ಚದ ಬಿಬಿಎಂಪಿ ಅಧಿಕಾರಿಗಳು, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಉಡಾಫೆ ಮಾತನಾಡಿದ್ದಾರೆ. ಒಂದು ರಸ್ತೆ ಗುಂಡಿ ಮುಚ್ಚಿದರೆ ಮತ್ತೊಂದು ಗುಂಡಿ ನಿರ್ಮಾಣವಾಗುತ್ತದೆ. ಮಳೆ ನಡುವೆ ಕೆಲಸ ಮಾಡೋದು ಹುಡುಗಾಟ ಅಂದ್ಕೊಂಡ್ರಾ? ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾವು ಒಂದು ಹಳೆ ಗುಂಡಿ ಮುಚ್ಚಿದರೆ ಮತ್ತೊಂದು ಹೊಸ ಗುಂಡಿ ಬೀಳುತ್ತಿರುತ್ತದೆ. ಮಳೆ ನಡುವೆ ರಸ್ತೆ ಗುಂಡಿ ಮುಚ್ಚುವುದೇ ಸವಾಲಾಗಿದೆ. ನಮ್ಮ ನಗರವನ್ನು ನಾವೇ ಖಂಡಿಸುವುದು ಸರಿಯಲ್ಲ. ಬೆಂಗಳೂರು ರಸ್ತೆಗಳೆಲ್ಲ ನ್ಯಾಷನಲ್ ಹೈವೆಗಳಲ್ಲ. ದಿನಕ್ಕೊಬ್ಬರು ಯುಜಿಡಿ, ಸಂಪ್ ರಿಪೇರಿ ಅಂತ ರಸ್ತೆ ಅಗೆಯುತ್ತಿರುತ್ತಾರೆ. ಹೀಗಿರುವಾಗ ಕೆಲಸ ಮಾಡೋದು ಅಂದ್ರೆ ಹುಡುಗಾಟನಾ? ಎಂದು ಕಿಡಿಕಾರಿದ್ದಾರೆ.
ಬೆಂಗಳೂರು ನಗರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗುಣಮಟ್ಟದ ಕಾಮಗಾರಿಗೆ ನಾವು ಆದ್ಯತೆ ನೀಡುತ್ತೇವೆ. ಈಗಾಗಲೇ ರಸ್ತೆಗುಂಡಿ ಮುಚ್ಚುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.