ಚಿಕ್ಕಮಗಳೂರು: ಕರಾವಳಿ, ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಅತಿವೃಷ್ಟಿಯಿಂದಾಗಿ ಜಿಲ್ಲೆಗಳ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ತೋಟಗಳು, ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಬೆಳೆದ ಬೆಳೆಗಳು ನೀರುಪಾಲಾಗಿವೆ. ಮನೆಗಳು ಕುಸಿದು ಬಿದ್ದಿದ್ದು, ಹಲವೆಡೆ ಭೂಕುಸಿತವುಂಟಾಗುತ್ತಿದೆ. ವರುಣಾರ್ಭಟಕ್ಕೆ ಜನರು ತತ್ತರಿಸಿದ್ದು ಜನಪ್ರತಿನಿಧಿಗಳು ದೇವರ ಮೊರೆಹೋಗಿದ್ದಾರೆ.
ಚಿಕ್ಕಮಗಳೂರು, ಮಲೆನಾಡು ಭಾಗದಲ್ಲಿ ಮಳೆ ಆರ್ಭಟದಿಂದ ಅನಾಹುತಗಳು ಸಂಭವಿಸುತ್ತಿದ್ದು, ಮಳೆ ಕಡಿಮೆಯಾಗಲಿ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರು ಶೃಂಗೇರಿ ಜಗದ್ಗುರು ಮೊರೆ ಹೋಗಿದ್ದಾರೆ.
ಹಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಜನರು ಸಂಕಷ್ಟಕ್ಕೀಡಾಗಿದ್ದಾರೆ. ವರುಣನ ಆರ್ಭಟ ತಗ್ಗಲಿ ಎಂದು ಪ್ರಾರ್ಥಿಸಿ ಶೃಂಗೇರಿ ಶಾರದಾ ದೇವಿಗೆ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಹಾಗೂ ಶಾಸಕ ಟಿ.ಡಿ. ರಾಜೇಗೌಡ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದೇ ವೇಳೆ ಶೃಂಗೇರಿ ಜಗದ್ಗುರು ಭಾರತಿ ತೀರ್ಥ ಸ್ವಾಮೀಜಿ ಬಳಿ ಕರಾವಳಿ, ಮಲೆನಾಡು ಭಾಗದಲ್ಲಿ ಅತಿವೃಷ್ಠಿಯಾಗದಿರಲಿ. ವರುಣನ ಆರ್ಭಟ ಸ್ವಲ್ಪ ಮಟ್ಟಿಗೆ ತಣ್ಣಗಾಗಲಿ ಎಂದು ಪ್ರಾರ್ಥಿಸಿದ್ದಾರೆ.