ಶಿವಮೊಗ್ಗ ನಗರ ಸೇರಿದಂತೆ ಜಿಲ್ಲಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ನಿನ್ನೆ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಅಸಾನಿ ಚಂಡಮಾರುತದ ಹಿನ್ನೆಲೆ ಮತ್ತು ಮುಂಗಾರುವಿನ ಆಗಮನ ಈ ಎರಡೂ ಸೇರಿಕೊಂಡು ಇಡೀ ಮಲೆನಾಡಿನಲ್ಲಿ ಮಳೆಯ ರುದ್ರನರ್ತನ ಉಂಟಾಗಿದೆ.
ಕೆರೆ, ಹಳ್ಳ ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಭತ್ತ ಕೊಯ್ಲಿಗೆ ಬಂದಿದ್ದು, ಮಳೆಗೆ ಕೊಚ್ಚಿಹೋಗುವ ಭೀತಿ ಎದುರಾಗಿದೆ. ಅಲ್ಲದೆ, ಸಾಕಷ್ಟು ಸಂಕಷ್ಟ ಎದುರಾಗಿದೆ. ರೈತರ ಸಂಕಷ್ಟ ಒಂದು ಕಡೆಯಾದರೆ, ನಗರದಲ್ಲಿ ವಾಸಿಸುತ್ತಿರುವ ಅದರಲ್ಲೂ ತಗ್ಗಿನ ಪ್ರದೇಶ ಮತ್ತು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಬದುಕು ದುಸ್ತರವಾಗಿದೆ.
ರಾತ್ರಿಯಿಡೀ ಸುರಿದ ಮಳೆಗೆ ನಿದ್ರೆಯನ್ನೂ ಮಾಡದೇ ಆತಂಕದ ಕ್ಷಣಗಳನ್ನು ಇಲ್ಲಿನ ಸಾರ್ವಜನಿಕರು ಕಳೆಯುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ಆರಂಭವಾದ ಮೇಲಂತೂ ಅವಾಂತರಗಳೇ ಸೃಷ್ಟಿಯಾಗಿವೆ. ಎಲ್ಲಿ ಬೇಕೆಂದರಲ್ಲಿ ಚರಂಡಿ, ಬಾಕ್ಸ್ ಚರಂಡಿ, ಯುಜಿಡಿಗೆ ಗುಂಡಿಗಳನ್ನು ತೆಗೆದು, ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದೇ ಇರುವುದರಿಂದ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಹೋಗುವಂತಾಗಿದೆ. ಏಕೆಂದರೆ, ಮಳೆಯಿಂದಾಗಿ ಬಹುತೇಕ ರಸ್ತೆಗಳು ಜಲಾವೃತವಾಗಿದ್ದು, ಕಾಮಗಾರಿಯ ಗುಂಡಿಗಳು ಬಲಿಗಾಗಿ ಬಾಯಿತೆರೆದು ನಿಂತಂತಾಗಿದೆ.
ಅನೇಕ ಬಡಾವಣೆಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ, ಹೊಳೆಯಂತೆ ನೀರು ಹರಿಯುತ್ತಿದೆ. ರಾಜಕಾಲುವೆಗಳು ತುಂಬಿ ಬಡಾವಣೆಗಳ ಮನೆಗಳಿಗೆ ನೀರು ನುಗ್ಗುತ್ತಿದೆ. ಸ್ಮಾರ್ಟ್‍ಸಿಟಿ ಕಾಮಗಾರಿ ನಡೆಯುತ್ತಿರುವ ವಿನೋಬನಗರದ 60 ಅಡಿ ರಸ್ತೆಯ ಶುಭಮಂಗಳ ಸಮುದಾಯ ಭವನದ ಬಳಿ ಚರಂಡಿಯಲ್ಲಿ ನೀರು ಹರಿಯದೇ ನೂತನವಾಗಿ ನಿರ್ಮಿಸಿರುವ ರಸ್ತೆಯಲ್ಲಿಯೇ ಹರಿಯುತ್ತಿದೆ. ಇದೇ ರಸ್ತೆಯಲ್ಲಿರುವ ಚಾನಲ್ ಸೇತುವೆ ಮೇಲೂ ಮಳೆಯ ನೀರು ಹರಿಯುತ್ತಿದೆ.
ಇತ್ತೀಚೆಗಷ್ಟೇ ಕಟ್ಟಡ ಕುಸಿಯುವ ಭೀತಿಯಿಂದ ಹೊಸ ಕಟ್ಟಡ ಕಟ್ಟಿಸಿಕೊಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದ ನ್ಯೂ ಮಂಡ್ಲಿಯ ಸರ್ಕಾರಿ ಶಾಲೆಯ ಆವರಣ ಸಂಪೂರ್ಣ ಜಲಾವೃತಗೊಂಡಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರಿನ ರಸ್ತೆಯಲ್ಲಿ ಮೂರು ಅಡಿಗಳಷ್ಟು ನೀರು ನಿಂತಿದೆ. ಯಾವುದೇ ಬಡಾವಣೆಗಳ ನೀರು ಚರಂಡಿಗಳ ಮೂಲಕ ಸರಾಗವಾಗಿ ಹರಿಯದೇ ರಸ್ತೆಗಳ ಮೂಲಕವೇ ಕೊಳಚೆಯನ್ನು ಸೇರಿಸಿಕೊಂಡು ಹರಿಯುತ್ತಿದೆ.
ಇನ್ನು ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಜನರು ಮಳೆಯಿಂದ ಹೊರಗೆ ಬರುವುದೇ ಕಷ್ಟವಾಗಿದೆ. ಎರಡು ನಿಮಿಷವೂ ವಿಶ್ರಾಂತಿ ಕೊಡದೇ ಮೋಡಕ್ಕೆ ರಂಧ್ರ ಬಿದ್ದಂತೆ ಮಳೆ ಸುರಿಯುತ್ತಿದ್ದು, ತಮ್ಮ ದೈನಂದಿನ ಕೆಲಸಗಳಿಗಾಗಿ ಜನರು ಹೊರ ಬರುವುದು ಕಷ್ಟವಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳು ಜಿಲ್ಲಾದ್ಯಂತ ಶಾಲಾ – ಕಾಲೇಜುಗಳಿಗೆ ಒಂದು ದಿನ ರಜೆ ಘೋಷಿಸಿ ಆದೇಶಿಸಿದ್ದಾರೆ.