ಬೆಂಗಳೂರು; ರಾಜ್ಯದಲ್ಲಿ ಮಹಾಮಳೆ ಮುಂದುವರೆದಿದ್ದು, ಅವಾಂತರಗಳು ಸೃಷ್ಟಿಯಾಗುತ್ತಿವೆ. ಕರಾವಳಿ, ಮಲೆನಾಡು ಜಿಲ್ಲೆಗಳ ಜನರು ವರುಣಾರ್ಭಟಕ್ಕೆ ತತ್ತರಿಸಿದ್ದು, ಗುಡ್ಡ ಕುಸಿತ, ಭೂ ಕುಸಿತದಿಂದಾಗಿ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಕಳಸ ತಾಲೂಕಿನ ಹೊರನಾಡು ಬಳಿ ಮನೆಯೊಂದರ ಮೇಲೆ ಗುಡ್ಡ ಕುಸಿದಿದ್ದು, ಬೃಹತ್ ಬಂಡೆ, ಮರಗಳ ಸಮೇತ ಮಣ್ಣು ಕುಸಿದು ಬಿದ್ದಿದೆ. ಕುಟುಂಬ ಸದಸ್ಯರು ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ.
ಮನೆಂಯಗಳದಲ್ಲಿ ಮಕ್ಕಳು ಆಟವಾಡುತ್ತಿದ್ದ ವೇಳೆ ನೋಡ ನೋಡುತ್ತಿದ್ದಂತೆಯೇ ಗುಡ್ಡ ಕುಸಿದಿದ್ದು, ಮಕ್ಕಳು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉದಯ್ ಹಾಗೂ ವನಿತಾ ಎಂಬುವವರಿಗೆ ಸೇರಿದ ಮನೆಯ ಮೇಲೆ ಗುಡ್ಡ ಕುಸಿದಿದೆ.
ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುಟ್ಟಳ್ಳಿಯಲ್ಲಿ ಮತ್ತೆ ಭೂಕುಸಿತವುಂಟಾಗಿದ್ದು, ಗ್ರಾಮದ 10 ಕುಟುಂಬದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಇನ್ನು ಕೊಡಗಿನಾದ್ಯಂತ ರಣಮಳೆಗೆ ಜನರು ತತ್ತರಿಸಿದ್ದು, ಊರಬೈಲು ಗ್ರಾಮದಲ್ಲಿ ನಡುರಸ್ತೆಯೇ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ರಸ್ತೆ ಮಧ್ಯೆ 15 ಅಡಿಗಳಷ್ಟು ಹೊಂಡ ನಿರ್ಮಾಣವಾಗಿದೆ. ಊರಬೈಲ್ ಹಾಗೂ ಚೆಂಬು ಗ್ರಾಮಗಳ ನಡುವಿನ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.