ಮಂಗಳೂರು: ಮಳಲಿ ದರ್ಗಾದಲ್ಲಿ ಹಿಂದೂ ದೇವರ ಕುರುಹುಗಳು ಪತ್ತೆಯಾಗಿದ್ದು, ಈ ಬಗ್ಗೆ ತಾಂಬೂಲ ಪ್ರಶ್ನೆಗೆ ಹಿಂದೂಪರ ಸಂಘಟನೆಗಳು ಮುಂದಾದ ವಿಚಾರ ಇದೀಗ ಎಸ್ ಡಿ ಪಿ ಐ ಸಂಘಟನೆಯನ್ನು ಕೆರಳಿಸಿದ್ದು, ಮಸೀದಿಯ ಒಂದು ಹಿಡಿ ಮರಳನ್ನೂ ನಾವು ಕೊಡುವುದಿಲ್ಲ ಎಂದು ಅಬ್ದುಲ್ ಮಜೀದ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿರುವ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ನಾವು ಮಸೀದಿಯನ್ನು ಬಿಟ್ಟು ಕೊಡುತ್ತೇವೆ ಎಂದು ಕನಸು ಕಾಣಬೇಡಿ. ಮಳಲಿ ಮಸೀದಿಯ ಒಂದು ಹಿಡಿ ಮರಳನ್ನು ಕೂಡ ಮರಳಿ ಕೊಡುವುದಿಲ್ಲ ಎಂದು ಹಿಂದೂ ಪರಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಭಾರತ ನಮ್ಮದು, ಇದಕ್ಕಾಗಿ ನಾವು ರಕ್ತ ಹರಿಸಿದ್ದೇವೆ. ದೇಶದಲ್ಲಿ ನಮಗೂ ಬದುಕಿ ಬಾಳುವ ಹಕ್ಕಿದೆ. ಯಾವುದೇ ಕಾರಣಕ್ಕೂ ಮಳಲಿ ಮಸೀದಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವರ ವಿಗ್ರಹಗಳು ಪತ್ತೆ ವಿಚಾರ ಕೋರ್ಟ್ ಮೆಟ್ಟಿಲೇರಿರುವ ಬೆನ್ನಲ್ಲೇ ಇದೀಗ ಹಲವು ಮಸೀದಿಗಳ ಜಾಗದಲ್ಲಿ ದೇವರ ವಿಗ್ರಹಗಳು ಇರುವ ಕುರುಹು ಪತ್ತೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.