ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ಸರ್ಕಾರದ ಕ್ರಮದ ಬಗ್ಗೆ ಕಿಡಿ ಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಜನರ ದುಡ್ಡನ್ನು ಬಿಜೆಪಿಯವರು ಮನಸ್ಸಿಗೆ ಬಂದಂತೆ ಬಳಸುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಹಚ್ಚುವ ಅಗತ್ಯವೇನಿದೆ ? ಇದೇನು ಬಿಜೆಪಿ ದುಡ್ಡಾ ? ಜನರ ದುಡ್ಡು. ಜನರ ದುಡ್ದಿನಲ್ಲಿ ಕೇಸರಿ ಬಣ್ಣ ಬಳಿಯಲು ಹೊರಟಿದ್ದಾರೆ. ರಾಜ್ಯದ ಜನ ಕೇಸರಿಕರಣ ಮಾಡಿ ಅಂತ ಹೇಳಿದ್ದಾರಾ ? ಎಂದು ಪ್ರಶ್ನಿಸಿದ್ದಾರೆ.
ಬಾಯಿಗೆ ಬಂದಂತೆ ಮಾತನಾಡುತ್ತಾ, ಮನಸ್ಸಿಗೆ ಬಂದಂತೆ ಸರ್ಕಾರ ನಡೆಸುವುದಲ್ಲ. ಹೀಗೆ ಮಾಡುವುದು ಜನವಿರೋಧಿ, ಸಂವಿಧಾನ ವಿರೋಧಿಯಾಗುತ್ತೆ. ಹಿಂಬಾಗಿಲಿಂದ ಅಧಿಕಾರಕ್ಕೆ ಬಂದು ಈಗ ಮನ ಬಂದಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.