ಬೆಳಗಾವಿ: ವರುಣಾರ್ಭಟಕ್ಕೆ ರಾಜಧಾನಿ ಬೆಂಗಳೂರು ಬಹುತೇಕ ಮುಳುಗಡೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ರಣ ಮಳೆಯಾಗುತ್ತಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಸಂಕಷ್ಟಕ್ಕೀಡಾಗಿರುವ ಜನರನ್ನು ರಕ್ಷಿಸಲು ಯಾರೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಭಾರಿ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಪ್ರವಾಹದಲ್ಲಿ ಸಿಲುಕಿಕೊಂಡಿರುವ ಹಲವು ಗ್ರಾಮಗಳ ಜನರನ್ನು ಸಂಪರ್ಕಿಸುವುದು ಅಧಿಕಾರಿಗಳಿಗೆ ಕಷ್ಟಸಾಧ್ಯವಾಗಿದೆ. ಇಂತಹ ಸ್ಥಿತಿಯಲ್ಲಿ ಬೆಳಗಾವಿಯ ಗೋಕಾಕ್ ತಾಲೂಕಿನ ಮಾನಿಕವಾಡಿ ಗ್ರಾಮದಲ್ಲಿ ನದಿ ನೀರು ಮನೆಗಳಿಗೆ ಪ್ರವಾಹದಂತೆ ನುಗ್ಗುತ್ತಿದ್ದು, ಪ್ರಾಣ ರಕ್ಷಣೆಗಾಗಿ ಕುಟುಂಬ ಸದಸ್ಯರು ಮನೆ ಮೇಲೆ ಹತ್ತಿ ಕುಳಿತು ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ.
ಇನ್ನೊಂದೆಡೆ ಇದೇ ಗ್ರಾಮದಲ್ಲಿ ಮನೆಯೊಳಗೆ ನೀರಿನಲ್ಲಿ ಸಿಲುಕಿದ್ದ 12 ದಿನದ ಹಸುಗೂಸು ಹಾಗೂ ಬಾಣಂತಿಯನ್ನು ಸ್ಥಳೀಯರೇ ಹಗ್ಗದ ಸಹಾಯದಿಂದ ರಕ್ಷಿಸಿರುವ ಘಟನೆ ನಡೆದಿದೆ. ಮನೆಗೆ ನೀರು ನುಗ್ಗುತ್ತಿರುವುದರಿಂದ ಬಾಣಂತಿ ಹಾಗೂ ಮಗು ಸಂಕಷ್ಟಕ್ಕೆ ಸಿಲುಕಿರುವ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಮಗು ಹಾಗೂ ತಾಯಿ ಇಬ್ಬರನ್ನೂ ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ.