ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರನ್ನು ಟಿವಿ / ಓಟಿಟಿ ಮನೋರಂಜನ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದ್ದು, ಏನೂ ಅರಿಯದ ಮಕ್ಕಳ ಮನಸ್ಸಿನ ಮೇಲೆ ಇದು ಪರಿಣಾಮ ಬೀರುತ್ತದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಈಗ ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಕಠಿಣ ನಿಯಮವನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ.
2011ರ ಬಳಿಕ ಇದೇ ಮೊದಲ ಬಾರಿಗೆ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದ್ದು, ಟಿವಿ ಮಾತ್ರವಲ್ಲದೆ ಓ ಟಿ ಟಿ ಹಾಗೂ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರಂ ಗಳನ್ನು ಸಹ ಮಕ್ಕಳ ಆಯೋಗ ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿದೆ. ಈ ಮೂಲಕ ಮನರಂಜನಾ ಕಾರ್ಯಕ್ರಮದ ಹೆಸರಿನಲ್ಲಿ ಮಕ್ಕಳ ದುರ್ಬಳಕೆ ಹಾಗೂ ಶೋಷಣೆ ತಡೆಯಲು ಮುಂದಾಗಿದೆ.
ಹೊಸ ಮಾರ್ಗಸೂಚಿಯ ಪ್ರಕಾರ ಮಕ್ಕಳನ್ನು ಬಳಸಿಕೊಳ್ಳಲು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದ್ದು, ಸುರಕ್ಷತೆ ಹೊಣೆ ಹೊತ್ತಿರುವ ವ್ಯಕ್ತಿ ಸೇರಿದಂತೆ ಇತರ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ಮುಚ್ಚಳಿಕೆ ಮೂಲಕ ಸಲ್ಲಿಸಬೇಕಿದೆ.
ಮಕ್ಕಳ ಮಾನಸಿಕ ನೋವಿಗೆ ಕಾರಣವಾಗುವಂತಹ ಅಶ್ಲೀಲ ಅಥವಾ ಅಸಭ್ಯ ಪಾತ್ರಗಳನ್ನು ನೀಡದಿರಲು ಸೂಚಿಸಲಾಗಿದೆ.
ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವೇಳೆ ಪೋಷಕರು ಅವರೊಂದಿಗೆ ಇರುವುದು ಕಡ್ಡಾಯವಾಗಿದೆ.
ಅಲ್ಲದೆ ಕಾರ್ಯಕ್ರಮದ ಸ್ಥಳದಲ್ಲಿ ಮಕ್ಕಳು ಬಟ್ಟೆ ಬದಲಾಯಿಸಿಕೊಳ್ಳಲು ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಲು ಸೂಚಿಸಲಾಗಿದೆ.
ಮಕ್ಕಳು ಗಳಿಸಿದ ಹಣದಲ್ಲಿ ಶೇ.20ರಷ್ಟು ಹಣವನ್ನು ಫಿಕ್ಸೆಡ್ ಡೆಪಾಸಿಟ್ ಆಗಿ ಇರಿಸಬೇಕಿದೆ.